Sarayu's writings in Kannada

Name:
Location: Bangalore, Karnataka, India

Tuesday, October 03, 2006

ಶ್ರೀ ವರಲಂಚದೇವರ ವ್ರತ

ಶ್ರೀ ವರಲಂಚದೇವರ ಈ ವ್ರತವನ್ನು ಸದ್ಭಕ್ತಿ ಹಾಗೂ ಸವಿನಯನದಿಂದ ನಡೆಸಿದ್ದಲ್ಲಿ ಆ ದೇವರ ಅನುಗ್ರಹಕ್ಕೆ ಪಾತ್ರರಾಗುವುದರಲ್ಲಿ ಸಂಶಯವಿಲ್ಲ. ಈ ವ್ರತವನ್ನು ಸ್ವತಃ ತಾವೇ ನಡೆಸಬಹುದು, ಇಲ್ಲ ಮಧ್ಯವರ್ತಿಗಳ ಮೂಲಕವೂ ಮಾಡಬಹುದು.

ಈ ವ್ರತವನ್ನು ವರ್ಷದ ೩೬೫ ದಿನಗಳಲ್ಲೂ ಮಾಡಬಹುದು. ಆದರೆ ಶನಿವಾರ, ರವಿವಾರ ಮತ್ತು ಇತರೆ ಸರ್ಕಾರಿ ರಜಾದಿನಗಳಲ್ಲಿ ಮಾಡಿದರೆ ಫಲ ಸಿದ್ಧಿ ಗ್ಯಾರಂಟಿ ಇರುವುದಿಲ್ಲ. ಈ ವ್ರತಕ್ಕೆ ಕಾಲ ನಿಯಮಗಳು - ಅಂದರೆ ಪ್ರಾತಃಕಾಲ, ಮಧ್ಯಾಹ್ನ, ಸಾಯಂಕಾಲ, ರಾತ್ರಿ ಎಂಬುವುದಿರುವುದಿಲ್ಲ. ಆ ದೇವರ ಕೃಪಾಕಟಾಕ್ಷ ಯಾವ ಸಮಯದಲ್ಲಿ ಅನುಗ್ರಹವಾಗುತ್ತದೆಂದು ಮರಿದೇವರುಗಳ ಮೂಲಕ ಅರಿತು ನಡೆಸತಕ್ಕದ್ದು.

ಹತ್ತು ಇಪ್ಪತ್ತರ ಒಂದಷ್ಟು ನೋಟುಗಳನ್ನು, ಐವತ್ತು, ನೂರು, ಐನೂರು, ಸಾವಿರದ ನೋಟುಗಳನ್ನು ಒಂದು ಕೈಚೀಲದಲ್ಲಿಯೂ- ಬ್ರೀಫ್ ಕೇಸಿನಲ್ಲಿ ಬೇರೆ ಬೇರೆಯಾಗಿ ಇಟ್ಟುಕೊಳ್ಳತಕ್ಕದ್ದು. ಇದರೊಟ್ಟಿಗೆ ಖಾಲಿ ಕವರುಗಳನ್ನು ಒಂದುಕಡೆ ಸುಲಭವಾಗಿ ಸಿಗುವಂತೆ ಇರಿಸಿಕೊಳ್ಳತಕ್ಕದ್ದು.

ಪೂಜಾ ವಿಧಾನವು ಯಾವರೀತಿಯ ಫಲ ಸಿದ್ಧಿಗಾಗಿ, ಹಾಗೂ ಎಷ್ಟು ದಿನಗಳಲ್ಲಿ ಫಲಪ್ರದವಾಗಬೇಕೆಂಬುದರಮೇಲೆ ಅವಲಂಬಿಸಿರುತ್ತದೆ.

ಪೂಜಾ ಸಾಮಗ್ರಿಗಳು ಧನರೂಪದಲ್ಲೇ ಇರಬೇಕೆಂಬ ನಿಯಮವಿಲ್ಲ. ನಗಗಳ, ನಿವೇಶನ ಪತ್ರಗಳ, ವಾಹನಗಳ ಇಲ್ಲ ಲಂಚದೇವರ ಯಾವುದೇ ಇಷ್ಟಾರ್ಥರೂಪದಲ್ಲಿ ಬೇಕಾದರೂ ಆಗಬಹುದು.

ಮನದಲ್ಲೇ, ಆಗಬೇಕಾದ ಕಾರ್ಯವನ್ನು ಯಾವ ರೀತಿ ಪೂರ್ಣಗೊಳಿಸ ಬಹುದೆಂದು ಆಲೋಚಿಸುವುದು. ದ್ವಾರಪಾಲಕ ಪ್ರೀತ್ಯರ್ಥಂ- ಎಂದು ಮನದಲ್ಲಿ ಧ್ಯಾನಿಸುತ್ತಾ, ಹತ್ತು ಇಪ್ಪತ್ತರ ನೋಟುಗಳನ್ನು ಎಡ ಜೇಬಿನಲ್ಲಿ ಕಾಣುವಂತೆ ಇಟ್ಟುಕೊಳ್ಳತಕ್ಕದ್ದು. ಎಡ ಜೇಬನ್ನು ಸವರುತ್ತಾ ದ್ವಾರಪಾಲಕನನ್ನು ಸಮೀಪಿಸಿ ನಗುಮುಖದಿಂದ ಮಾತನಾಡಿಸುವುದು. ದ್ವಾರಪಾಲಕನು ನಿಮ್ಮ ಜೇಬನ್ನೇ ನೋಡುತ್ತಾ ನಮಸ್ಕರಿಸಿದೊಡನೆ ಎರಡು ಹತ್ತು ಅಥವ ಒಂದು ಇಪ್ಪತ್ತು ನೋಟನ್ನು ಕಿಸೆಯಿಂದ ತೆಗೆದು ಆತನ ಕೈಯಲ್ಲಿ ಸಮರ್ಪಿಸಿ "ದ್ವಾರಪಾಲಕ ಪೂಜಾಂ ಸಮರ್ಪಯಾಮಿ"ಎಂದು ಮನಸ್ಸಿನಲ್ಲೇ ಕೈ ಮುಗಿದು - ಮರಿದೇವರ ಯಾ ಉಪದೇವರ ಪೂಜೆಗೆ ಮುನ್ನಡೆಯುವುದು.

ಮರಿದೇವರುಗಳಿಗೆ ನಮ್ರತೆಯಿಂದ ವಂದನೆಯನ್ನು ಸಲ್ಲಿಸಿ ಕೈಚೀಲ ಯಾ ಬ್ರೀಫ್ಕೇಸು ಕಾಣುವಂತೆ ನಿಂತುಕೊಳತಕ್ಕದ್ದು. ಮರಿದೇವರುಗಳು ಆಸನವನ್ನು ತೋರಿಸುತ್ತಾರೆ. ಮನಸ್ಸಿನಲ್ಲಿ ಏನೇಭಾವನೆಗಳಿದ್ದರೂ ನಗು ಮುಖದಿಂದ ಕುಳಿತುಕೊಂಡು ಮೊದಲೇ ಹೇಳಿರುವಂತೆ ಕಾರ್ಯ ಸಿದ್ಧಿಗೆ ತಕ್ಕಂತೆ ಖಾಲಿ ಲಕೋಟೆಯಲ್ಲಿ ಶಕ್ತಾನುಸಾರವಾಗಿ ಸಮರ್ಪಿಸಿ "ಇತಿ ಉಪದೇವ ಪೂಜಾಂ ಸಮರ್ಪಯಾಮಿ"ಎಂದು ಮನಸ್ಸಿನಲ್ಲೇ ಹೇಳಿಕೊಂಡು - ಮರಿ ದೇವರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗುವುದು.

ಇತಿ ಉಪದೇವರುಗಳ - ಮರಿದೇವರುಗಳ ಪೂಜಾ ವಿಧಾನಂ ಸಮಾಪ್ತಂ ಎಂದು ಹೇಳಿಕೊಂಡು - ಇತಿ ಮೂಲ ಲಂಚದೇವರ ಪೂಜಾ ಆರಂಭಂ ಎಂದು ಮನಸ್ಸಿನಲ್ಲೇ ಪ್ರಾರ್ಥನೆ ಮಾಡಿಕೊಳ್ಳಬೇಕು.

ಪೂಜಾ ವಿಧಾನವು ಯಾವ ಕಾರ್ಯಕ್ಕಾಗಿ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಮುಖ್ಯ ದೇವರ ಅನುಗ್ರಹಕ್ಕಾಗಿ ಅಪಾರ ಭಕ್ತ ವೃಂದವೇ ನೆರೆದಿರಬಹುದು. ಆಸನ ಖಾಲಿ ಇದ್ದರೆ ಕುಳಿತುಕೊಂಡು ಮನಸ್ಸಿನಲ್ಲೇ - ದೇವರನ್ನು ನೆನೆಸಿಕೊಳ್ಳುತ್ತಾ ಶಾಂತರೀತಿಯಲ್ಲಿ ಕುಳಿತಿರಬೇಕು. ಆಸನ ಇಲ್ಲವಾದಲ್ಲಿ ನಿಂತುಕೊಂಡೇ ಪ್ರಾರ್ಥನೆ ಮಾಡಬೇಕಾಗುತ್ತದೆ. ಪ್ರಾರ್ಥನಾ ಪೂಜೆ ನಿಮಿಷಗಳಿರಬಹುದು, ಗಂಟೆಗಳಾಗಬಹುದು - ಸಹನೆ ಅತ್ಯಗತ್ಯ. ಪೂಜಾ ಫಲವು ಮುಖ್ಯ ದೇವರ ಮೂಡ್ ಮತ್ತು ಪೂಜಾ ವಿಧಾನವನ್ನು ಅವಲಂಬಿಸಿರುತ್ತದೆ. ಪ್ರಥಮ ಪೂಜೆಯಲ್ಲಿ ಫಲ ಸಿಗದಿದ್ದಲ್ಲಿ - ಮರಳಿಯತ್ನವ ಮಾಡಬೇಕು. ಪೂಜೆಯನ್ನು ಪ್ರತಿವಾರ ಇಲ್ಲ ಮಾಸಕ್ಕೊಮ್ಮೆ - ಭಕ್ತಿ ನಮ್ರತೆಯಿಂದ ನಡೆಸಿದ್ದಲ್ಲಿ ಫಲಪ್ರದವಾಗಿ ಸುಖ ಸಂತೋಷದಿಂದ ಇರುವುದರಲ್ಲಿ ಸಂಶಯವಿಲ್ಲ.

ಶ್ರೀ ಲಂಚದೇವರ ವ್ರತ - ಕಥಾ ಪ್ರಸಂಗ.

ಎಲೈ ಕಣ್ವಋಷಿಯ ಸಾಕು ಮಗಳೇ - ಈ ರೀತಿ ಪೂಜೆಯಿಂದ ಫಲ ದೊರೆತ ದೃಷ್ಟಾಂತಗಳಿವೆಯೇ ಎಂದು ಸತ್ಯಪ್ರಿಯಧರ್ಮಪತಿ ಕೇಳಲಾಗಿ -
"ಸತ್ಯಪ್ರಿಯ ಧರ್ಮಪತಿಗಳೇ - ತಾವು ಯಾವಾಗಲೂ ನೇರವಾಗಿ ಯಾವುದನ್ನೂ ಒಪ್ಪುವುದಿಲ್ಲ. ಸಾಕ್ಷಾಧಾರಗಳು ಇವೆಯೇ- ಎಂದು ಪ್ರಶ್ನಿಸುತ್ತೀರಿ. ನಿಮ್ಮ ಅನುಮಾನವನ್ನು ಹೋಗಲಾಡಿಸಲು ಹೇಳುತ್ತೇನೆ - ಕೇಳುವಂತವರಾಗಿ. ಸಂಕಟದಿಂದ ಪರಿತಪಿಸುತ್ತಿದ್ದ ಆರಕ್ಷಕ ಇಲಾಖೆಯ ಅಧಿಕಾರಿಯ ಕಥೆಯನ್ನು ಹೇಳುತ್ತೇನೆ - ಮನಸ್ಸಿಟ್ಟು ಕೇಳೀ. ಮಧ್ಯೆ-ಮಧ್ಯೆ ಪ್ರಶ್ನೆಗಳನ್ನು ಹಾಕಿ, ಕಥೆಗೆ ಅಡ್ಡಿ ಮಾಡಬೇಡಿ.
ಧರ್ಮರಕ್ಷಕ - ದುಷ್ಟಶಿಕ್ಷಕ ಎಂದೇ ಪ್ರಸಿದ್ಧರಾಗಿದ್ದರು - ಆರಕ್ಷಕ ಇಲಾಖೆಯ ಅಧಿಕಾರಿ ಆನಂದಮೂರ್ತಿಗಳು. ಕೊಲೆ, ಸುಲಿಗೆ ಗೂಂಡಾಗಿರಿಗಳಿಗೆ ಹೆಸರುವಾಸಿಯಾಗಿರುವ ಪ್ರದೇಶಗಳಿಗೆ ಸರ್ಕಾರ ಅವರನ್ನು ವರ್ಗಾವಣೆ ಮಾಡುತ್ತಿತ್ತು. ಆನಂದಮೂರ್ತಿಯವರು ಆರಕ್ಷಕ ಅಧಿಕಾರಿ ಎಂದು ಭಯಪಡದೆ, ಅಲ್ಲಿನ ಪ್ರಜೆಗಳು ಗುಂಪು ಗುಂಪಾಗಿ ಬಂದು - ತಮ್ಮ ಊರಿನಲ್ಲಿ ನಡೆಯುವ ಕೊಲೆ, ಸುಲಿಗೆ, ಗೂಂಡಾಗಿರಿಗಳನ್ನು ಮನಬಿಚ್ಚಿ ಹೇಳಿಕೊಂಡು ಗೊಳೋ ಎಂದು ಕಣ್ಣೀರು ಸುರಿಸುತ್ತಿರಲಾಗಿ - ನಾನಿರುವುದೆ ನಿಮಗಾಗಿ, ನೀವಿರುವುದೆ ನನಗಾಗಿ, ಕಣ್ಣೀರೇಕೆ - ಬಿಸಿಉಸಿರೇಕೆ ಎಂದು ಹಾಡಿದ ಅಣ್ಣ ಡಾ||ರಾಜ್ ಕುಮಾರ್ ರವರಂತೆ - ಆನಂದಮೂರ್ತಿಯವರು -ಪ್ರಜೆಗಳನ್ನು ಸಂತೈಸಿ ಕಳುಹಿಸಿ, ಕೊಲೆ, ಸುಲಿಗೆ, ಗೂಂಡಾಗಿರಿ ಮಾಡುತ್ತಿದ್ದ ಚಂಡ-ಪ್ರಚಂಡರನ್ನು ತಾವೇ ಖುದ್ದಾಗಿ ಹಿಡಿದು ಸತ್ಯ ಧರ್ಮ ಅಹಿಂಸೆಗಳ ಆದರ್ಶವನ್ನು ಅವರಿಗೆ ಬೋಧಿಸಿ ಅಧರ್ಮದಿಂದ ಧರ್ಮದ ಕಡೆಗೆ ಪರಿವರ್ತಿಸುತ್ತಿರಲಾಗಿ - ಆನಂದಮೂರ್ತಿಯವರು ಕಾರ್ಯ ನಿರ್ವಹಿಸುತ್ತಿದ್ದ ಪ್ರದೇಶದಲ್ಲಿ ಕಳ್ಳತನ, ಸುಲಿಗೆ, ದರೋಡೆ ಕೊಲೆಗಳೇ ಇರುತ್ತಿರಲಿಲ್ಲ. ಪೇದೆ ಪಾಪಯ್ಯ, ಹಾಗೂ ಬೇರೆ ಅಧೀನ ಅಧಿಕಾರಿಗಳು, ಆನಂದಮೂರ್ತಿಗಳ ಈ ಕಾರ್ಯ ವೈಖರಿಯಿಂದ - ಮಾಮೂಲಿಯಿಂದ ವಂಚಿತರಾದವೆಂದು ಗೊಣಗುಟ್ಟುತ್ತಿದ್ದರು. ಒಮ್ಮೆ ಇಂತಿರಲಾಗಿ - ಆನಂದಮೂರ್ತಿಯವರ ಮೇಲಧಿಕಾರಿಗಳು, ಆರಕ್ಷಕ ಠಾಣೆಗೆ ತನಿಖೆಗೆ ಬರಲಾಗಿ - ಆ ಪ್ರದೇಶದಲ್ಲಿ ಯಾವುದೇ ಅಪರಾಧಗಳಿಲ್ಲದೆ ಜನರು ಸುಖ ಸಂತೋಷದಿಂದ ಇರುವುದನ್ನು ನೋಡಿ ಅಚ್ಚರಿಪಟ್ಟರು. ಠಾಣೆಯ ಫಲಕದಲ್ಲಿ ಯಾವುದೇ ಅಪರಾಧಗಳ ಅಂಕಿಅಂಶಗಳಿರಲಿಲ್ಲ. ಧರ್ಮಾರಕ್ಷಕ ಆನಂದಮೂರ್ತಿಯವರ ಬಗ್ಗೆ ಮೆಚ್ಚುಗೆ ಸೂಚಿಸಿದರು ಆ ಹಿರಿಯ ಅಧಿಕಾರಿಗಳು.

ಇಂತಿರಲಾಗಿ - ಆ ಹಿರಿಯ ಅಧಿಕಾರಿಗಳು ತಂಗಿದ್ದ ಸರ್ಕಾರಿ ಅತಿಥಿ ಗೃಹಕ್ಕೆ - ರಾತ್ರಿ ಹತ್ತರ ನಂತರ ಪೇದೆ ಪಾಪಯ್ಯ ಹಾಗೂ ಇತರೆ ಅಧೀನ ಅಧಿಕಾರಿಗಳು ತೆರಳಿ ತಮ್ಮ ಅಳಲನ್ನು ತೋಡಿಕೊಂಡರು. "ಆನಂದಮೂರ್ತಿಗಳು -ಬಂದಾಗಿನಿಂದಲೂ ಒಂದು ಚಿಕ್ಕ ಕಳ್ಳತನವೂ ಈ ಪ್ರದೇಶದಲ್ಲಿ ನಡೆದಿಲ್ಲ, ತಮ್ಮನ್ನು ಕಂಡರೆ ಅಂಜಿ ಓಡಬೇಕು - ಹಾಗಿರುವಲ್ಲಿ ಇಲ್ಲಿ ಅಂತಿಲ್ಲ, ತಮ್ಮ ಸ್ಥಾನಕ್ಕೆ ಬೆಲೆ ಇಲ್ಲವಾಗಿದೆ - ಇಲಾಖೆಗೆ ಅವಮಾನವಾಗಿದೆ" ಇಂತೆಂದು ದೊಡ್ಡ ಪಟ್ಟಿಯನ್ನೇ ಅವರ ಮುಂದಿಟ್ಟರು. ಉತ್ತಮ ಉಡುಗೊರೆಯನ್ನಿತ್ತು ಸನ್ಮಾನಿಸಿದರು. ಅವರ ಅಳಲನ್ನು ಕೇಳಿ, ಅವರಿತ್ತ ಉಡುಗೊರೆಯನ್ನು ಸ್ವೀಕರಿಸಿ - ಸಂತೃಪ್ತರಾದ ಆ ಹಿರಿಯ ಅಧಿಕಾರಿಗಳು "ಚಿಂತಿಸ ಬೇಡಿ - ಸಧ್ಯದಲ್ಲೇ ತಮ್ಮೆಲ್ಲರ ಸಂಕಟಕ್ಕೆ ಪರಿಹಾರ ನೀಡುವೆ" ಎಂದು ಅಭಯವನ್ನಿತ್ತರು.

ಆನಂದಮೂರ್ತಿಯವರ ದಕ್ಷತೆಗೆ ಬೆನ್ನು ತಟ್ಟಿದ್ದ ಆ ಹಿರಿಯ ಅಧಿಕಾರಿಗಳು, ಒಂದು ವಾರದಲ್ಲೇ ಮೂರ್ತಿಯವರನ್ನು ರಾಜ್ಯದ ಯಾವುದೋ ಮೂಲೆಯಲ್ಲಿರುವ ಕಂಡುಕೇಳದ ಜಾಗಕ್ಕೆ ಎತ್ತಂಗಡಿ ಮಾಡಿಬಿಟ್ಟರು.

ಪೇದೆ ಪಾಪಯ್ಯನ ಹೆಂಡತಿ ಪದ್ಮಾವತಿ - ಆನಂದಮೂರ್ತಿಯವರ ಮನೆಗೆ ಬಂದು "ಅಮ್ಮಾವ್ರೇ ಹೀಗಾಗ್ಬಾರದಿತ್ತು. ಸಾಹೇಬ್ರು ಬೋ ಒಳ್ಳೇವ್ರು- ಸಾಹೇಬ್ರನ್ನ ಅದ್ಯಾವ್ದೋ ಊರ್ಗೆ ವರ್ಗ ಮಾಡವ್ರಂತೆ - ಅಂಗಂತ ನಮ್ಮ ಯಜಮಾನ್ರು ಏಳುದ್ರು" - ಮನಸ್ಸಿನ ಆನಂದವನ್ನು ಮುಚ್ಚಿಟ್ಟು ಮೊಸಳೆ ಕಣ್ಣೇರನ್ನು ಸುರಿಸಿದಳು.

ಪದ್ಮಾವತಿಯ ಕತ್ತಿನಲ್ಲಿ ಝಗಿ-ಝಗಿಸುತ್ತಿದ್ದ ದಪ್ಪನೆಯ ಚಿನ್ನದ ಸರ, ಕೈಯ್ಯಲ್ಲಿದ್ದ ಭಾರಿ ಗಾತ್ರದ ಚಿನ್ನದ ಬಳೆಗಳನ್ನು ನೋಡಿ ಆನಂದಮೂರ್ತಿಯವರ ಸತಿ ಸರೋಜಿನಿಗೆ ಸಖತ್ ಸಿಟ್ಟು ಬಂತು.

ಪೇದೆ ಪಾಪಯ್ಯ ಎಲ್ಲಿ - ಹಿರಿಯ ಅಧಿಕಾರಿಗಳಾದ ಆನಂದಮೂರ್ತಿಗಳೆಲ್ಲಿ? ಅಂತಿರುವಲ್ಲಿ ಪಾಪಯ್ಯನ ಪತ್ನಿ ಪದ್ಮಾವತಿಯ ಬಳಿ ಎಷ್ಟೊಂದು ಆಭರಣಗಳಿವೆ. ಹಿರಿಯ ಅಧಿಕಾರಿ ಆನಂದಮೂರ್ತಿಗಳ ಸತಿ ಎಂದೆನ್ನಿಸಿಕೊಂಡಿರುವ ತನ್ನ ಬಳಿ - ನೆಟ್ಟಗೆ ಒಂದೆರಡೆಳೆ ಚಿನ್ನದ ಸರವಿಲ್ಲ, ಚಿನ್ನದ ಬಳೆಗಳಿಲ್ಲ. ಆರಕ್ಷಕ ಹಿರಿಯ ಗುಮಾಸ್ತನ ಮಗ ಜುಮ್ಮೆಂದು ಬೈಕ್‍ನಲ್ಲಿ ಸುತ್ತಾಡುತ್ತಾನೆ. ತಮ್ಮ ಮಗ ಕಾಲೇಜಿಗೆ ಸೈಕಲ್ಲಿನಲ್ಲೇ ಹೋಗುತ್ತಾನೆ. ಇದು ಯಾವ ನ್ಯಾಯ - ಈ ದಿನ ಅವರು ಮನೆಗೆ ಬರಲಿ - ಸುಮ್ಮನಿರುವುದಿಲ್ಲ- ಎಂದು ತೀರ್ಮಾನಿಸಿದಳು.

ಭುಗಿಲೆದ್ದ ಸಿಟ್ಟನ್ನು ತೋರ್ಪಡಿಸದೆ -"ಸರ್ಕಾರಿ ಕೆಲಸದಲ್ಲಿದ್ದವರಿಗೆ - ಅದರಲ್ಲೂ ಶಿಸ್ತಿನಲ್ಲಿರುವ ಅಧಿಕಾರಿಗಳಿಗೆ ಆಗಾಗ್ಗೆ ವರ್ಗಾವಣೆ ಆಗುತ್ತಲೇಇರುತ್ತದೆ - ಇದರಿಂದ ಬೇರೆಯವರಿಗೆ ಸಂತೋಷವಾಗುತ್ತಿರುತ್ತದೆ" ಎಂದು ಚುರುಕು ಮುಟ್ಟಿಸಿದಳು.

ಆನಂದಮೂರ್ತಿಯವರಿಗೆ ತಮ್ಮ ಹಿರಿಯ ಅಧಿಕಾರಿಗಳ ಮನೋಧರ್ಮ ಅರ್ಥವಾಗಲಿಲ್ಲ. ತಮ್ಮ ಕಾರ್ಯದಕ್ಷತೆಯನ್ನು ಮೆಚ್ಚಿ ಬೆನ್ನು ತಟ್ಟಿದ್ದ ಆ ಹಿರಿಯ ಅಧಿಕಾರಿಗಳು - ತಮ್ಮನ್ನು ರಾಜ್ಯದ ಯವುದೋ ಮೂಲೆಗೆ ವರ್ಗಾವಣೆ ಮಾಡಿರುವುದರ ಹಿನ್ನೆಲೆ ಏನಿರಬಹುದೆಂದು ಚಿಂತಿಸಿ ಸುಸ್ತಾದರು. ವರ್ಗಾವಣೆ ಮಾಡಿದ ಮೇಲಿನ ಅಧಿಕಾರಿಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಿ - ಸುಲಿಗೆ, ದರೋಡೆ, ಕೊಲೆ ಇತ್ಯಾದಿಗಳನ್ನು ತಹಬದಿಗೆ ತಂದ ತನಗೇಕೆ ದೂರದೂರಿಗೆ ವರ್ಗವಣೆಯಾಗಿದೆ- ಎಂದು ಕೇಳಲಾಗಿ, ಆ ಮೇಲಿನ ಅಧಿಕಾರಿಗಳು ಈ ರೀತಿ ಹೇಳಿದರು-"ಒಂದು ಚಿಕ್ಕ ಕಳ್ಳತನವೂ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿಇಲ್ಲವೆಂದರೆ ನಂಬಲಸಾಧ್ಯ. ನೀವು ಅಪರಾಧಿಗಳೊಡನೆ ಶಾಮೀಲಾಗಿರಬಹುದೆಂಬ ಅನುಮಾನ ನಮಗಿದೆ. ಊರಿನ ಕೆಲವರ ಹಾಗೂ ನಿಮ್ಮ ಠಾಣೆಯವರ ಅಭಿಪ್ರಾಯವೂ ಇದೆ ಆಗಿದೆ. ಅದ್ದರಿಂದ ವರ್ಗವಣೆ ಮಾಡಲಾಗಿದೆ"ಎಂದು ಗಡುಸಾಗಿ ಹೇಳಿ ರಿಸೀವರ್‍ಅನ್ನು ಧಕ್ಕೆಂದು ಇಟ್ಟರು.

ತನ್ನ ಸತ್ಯ-ಧರ್ಮವನ್ನು ಹಾಡಿ ಹೊಗಳುತ್ತಿದ್ದ ಈ ಊರಿನ ಜನರೇ ನನ್ನ ಬಗ್ಗೆ ದೂರಿತ್ತರೇ, ನಮ್ಮ ಸರ್ವೀಸ್‍ನಲ್ಲಿ ಇಂತಹ ಸಾಹೇಬ್ರನ್ನೇ ಕಂಡಿಲ್ಲ ಎಂದು ಪದೇ ಪದೇ ಹೇಳುತ್ತಿದ್ದ ಠಾಣೆಯವರೇ ಅನುಮಾನ ಪಟ್ಟರೇ, ಅಕಟಕಟ ಇದೆಂತಹ ಅಗ್ನಿ ಪರೀಕ್ಷೆ- ದೇವರೇ - ಎಂದು ಪ್ರಲಾಪಗೈದರು.

ಈ ಪರಿಸ್ಥಿತಿಯಲ್ಲಿ ಮನೆಗೆ ಮರಳಿದಾಗ ಸತಿ ಸರೋಜಿನಿ ಅವರನ್ನು ಸಂತೈಸದೆ "ಆ ಪೇದೆ ಪಾಪಯ್ಯನ ಪತ್ನಿ ಪದ್ಮಾವತಿ ಮೈತುಂಬ ಒಡವೆಗಳನ್ನು ಹೇರ್ಕೊಂಡು ಬಂದು - ಅಯ್ಯೋ ಪಾಪ, ಯಾವುದೋ ದೂರದೂರಿಗೆ ವರ್ಗವಾಯ್ತಂತೆ- ಅಂತಂದ್ಲು. ನೀವೂ ಆಫೀಸರ್ ಆಗಿದ್ದೀರಿ, ಏನೇನೋ ಪದವಿಗಳಲ್ಲಿ ಪದಕ ಪಡೆದಿದ್ದೀರಿ, ದಂಡ. ಪಿ.ಯು.ಸಿ. ನೂ ಆಗದ ಆ ಪೇದೆ ಪಾಪಯ್ಯಾನೇ ನಿಮಗಿಂತ ಮೇಲು" ಎಂದು ಸಿಡುಗುಟ್ಟಿದಳು.

ಹೆಂಡತಿಯ ದುರ್ಗಿ ಅವತಾರ ನೋಡಿ ಆರಕ್ಷಕ ಅಧಿಕಾರಿ ಆನಂದಮೂರ್ತಿಯವರಿಗೆ ತಮ್ಮ ಬಗ್ಗೆ ಜಿಗುಪ್ಸೆ ಮೂಡಿತು. ಮೌನದಿಂದ ಮನೆ ಬಿಟ್ಟರು. ಸತಿ ಸರೋಜಿನಿ ಸಿಡಿದೆದ್ದು ನುಡಿದ ಮಾತುಗಳು ಕಿವಿಯಲ್ಲಿ ಮೊಳಗುತ್ತಿದ್ದವು. ನೀವೂ ಆಫೀಸರ್ ಆಗಿದ್ದೀರಿ, ಏನೇನೋ ಪದವಿಗಳಲ್ಲಿ ಪದಕ ಪಡೆದಿದ್ದೀರಿ, ದಂಡ. ಪಿ.ಯು.ಸಿ.ನೂ ಆಗದ ಆ ಪೇದೆ ಪಾಪಯ್ಯಾನೇ ನಿಮಗಿಂತ ಮೇಲು ಏಂದು ಹೀಯಾಳಿಸಿದಳಲ್ಲ - ಇದಕ್ಕಿಂತ ಅವಮಾನ ಬೇರೆ ಉಂಟೇ - ಈ ಜೀವಕ್ಕೆ ಬೆಲೆ ಇಲ್ಲದ ಮೇಲೆ ಬದುಕಿ ಪ್ರಯೋಜನವೇನು - ಎಂದು ಕೆರೆಯ ದಂಡೆಯ ಬಳಿ ಪೇಚಾಡುತ್ತಾ ಕುಳಿತಿರಲಾಗಿ - ಪ್ರಕಾಶಮಾನವಾದ ಬೆಳಕೊಂದು ಕೆರೆಯ ಮಧ್ಯದಲ್ಲಿ ಮೂಡಿ ಬಂದಂತಾಯಿತು. ಆನಂದಮೂರ್ತಿಗಳು ಆ ಪ್ರಕಾಶನ್ನು ನೋಡುತ್ತಾ ಮೈ ಮರೆತಿರುವಾಗ - ಅಶರೀರವಾಣಿಯೊಂದು "ಧರ್ಮವೆಂದು ಕೂತಿರುವೆಯಲ್ಲ, ಈಗ ಅದಕ್ಕೆಲ್ಲಿ ಬೆಲೆ ಇದೆ? ಅನ್ಯಾಯ ಮಾಡಿದವನು ಅನ್ನ ತಿಂದ, ಸತ್ಯ ಹೇಳಿದವನು ಸತ್ತೇಹೋದ ಎಂಬ ನಾಣ್ನುಡಿ ನಿನಗೆ ಗೊತ್ತಿಲ್ಲವೇ - ಒಂದು ಕೈಯನ್ನು ಮೇಜಿನ ಕೆಳಗಿಡು - ಮತ್ತೊಂದು ಕೈಯ್ಯನ್ನು - ಇತಿ ಲಂಚ ದೇವ ಪ್ರೀಥ್ಯರ್ಥಂ - ಎಂದು ನೀಡುತ್ತಾ ಹೋಗು. ನೀನು ಉದ್ಧಾರವಾಗುತ್ತೀಯೆ, ಸತಿ ಸುತರೊಡನೆ ಸುಖವಾಗಿರುತ್ತೀಯೆ"ಎಂದು ಉಪದೇಶಾಮೃತವನ್ನು ನೀಡಿ ಮರೆಯಾಯಿತು.

"ಇನ್ನು ಎಷ್ಟುದ್ದ ಇದೆ ಈ ಕಥೆ?"ಎಂದು ಧರ್ಮಪತಿ ಕೇಳಲಾಗಿ - ಇನ್ನೇನು ಮುಕ್ತಾಯಕ್ಕೆ ಬಂದಿದೆ ಸಹನೆಯಿಂದ ಕೇಳುವಂತವರಾಗಿ - ಕಥೆ ಮುಂದುವರಿಸುವೆ - ಅಶರೀರವಾಣಿ ಅಮೃತದಂತಹ ಉಪದೇಶವನ್ನು ಪಾಲಿಸುತ್ತಾ ಶ್ರೀವರಲಂಚದೇವರ ವ್ರತವನ್ನು ಸಮಯಕ್ಕನುಸಾರವಾಗಿ ಪಾಲಿಸುತ್ತಾ - ಆನಂದಮೂರ್ತಿಗಳು ಸತಿ ಸರೋಜಿನಿ, ಸುತರೊಡನೆ ಸ್ವಂತ ಬಂಗಲೆಯಲ್ಲಿ ಸುಖ ಸಂತೋಷದಿಂದಿದ್ದರು.

"ಆನಂದಮೂರ್ತಿಯವರು ಸುಧಾರಣೆಗೆ ತಂದಿದ್ದ ಆ ಪ್ರದೇಶವೇನಾಯಿತು?"ಎಂದು ಧರ್ಮಪತಿ ಪ್ರಶ್ನಿಸಲಾಗಿ ಆ ಸಾಕುಮಗಳ ಹೆಸರಿನವಳು ಇಂತೆಂದಳು.

"ಆ ಮೂರ್ತಿಯವರು ಜಾಗ ಖಾಲಿ ಮಾಡಿದೊಡನೆ ಆ ಪ್ರದೇಶದಲ್ಲಿ ಗೂಂಡಾಗಿರಿ ಚಟುವಟಿಕೆಗಳು ಮರುಕಳಿಸಿದವು. ಠಾಣೆಯ ಫಲಕದಲ್ಲಿ ಅಪರಾಧಿಗಳ ಅಂಕಿ ಮೇಲೇರಿತು, ಹೊಸದಾಗಿ ಬಂದಿದ್ದ ಆರಕ್ಷಕ ಅಧಿಕಾರಿಗೆ ಸರ್ಕಾರದಿಂದ ಸನ್ಮಾನ ಸಿಕ್ಕಿತು. ಪೇದೆ ಪಾಪಯ್ಯನ ಪತ್ನಿ ಪದ್ಮಾವತಿಯ ಕೊರಳನ್ನು ಒಂದರಮೇಲೊಂದು ಚಿನ್ನದ ಸರ-ಪದಕ ಅಲಂಕರಿಸಿತು" -ಈ ರೀತಿ ಕಥೆ ಮುಂದುವರೆಸುತ್ತಿರುವಾಗ- ಮಧ್ಯೆ ತಡೆದು ಧರ್ಮಪತಿ " ಜನರಬಗ್ಗೆ ಚಿಂತಿಸ ಬೇಡವೇ?" ಹೀಗೆಂದು ಪ್ರಶ್ನಿಸಿದಾಗ -"ಜನರಬಗ್ಗೆ ಚಿಂತಿಸಿದ ಅಧಿಕಾರಿ ಆನಂದಮೂರ್ತಿಗಳ ಪರಿತಾಪ ಕೇಳಿದಿರಿ- ಇಂದಿನ ಮಕ್ಕಳೇ ಈ ದೇಶದ ಮುಂದಿನ ಸತ್ಪ್ರಜೆಗಳು-ಎಂದು ಉಪದೇಶ ನೀಡುತ್ತಾ, ಕಾಯಕವೇ ಕೈಲಾಸ ಎಂದು ಶ್ರಮಿಸಿದ ಪ್ರಾಥಮಿಕ ಶಾಲೆಯ ಶಿಕ್ಷಕ ಶರಣಪ್ಪನವರ ನೋವಿನ ಕಥೆಯನ್ನು ಕೇಳುವಂತರಾಗಿ" ಎಂದೆನ್ನಲಾಗಿ-"ಶಿಕ್ಷಕ ಶರಣಪ್ಪನವರ ಕಥೆಯನಂತರ ಆರೋಗ್ಯ ಇಲಾಖೆಯ ಅನಂತರಾಮ್‍ರವರ ಕಥೆ ಪ್ರಾರಂಭಿಸುವೆ, ನಂತರ ಸಾರಿಗೆ ಇಲಾಖೆಯ ಸಾಂಬಶಿವರವರ ಕಥೆ ಶುರುಮಾಡುತ್ತೀಯೇ-ಎಲ್ಲಾ ಇಲಾಖೆಯಲ್ಲೂ ಶ್ರೀಲಂಚದೇವರ ಪ್ರಭಾವ ಕಾಣಬರುವುದು - ಮಂಗಳ ಹೇಳು ಸಾಕಾಯಿತು"ಎಂದು ಧರ್ಮಪತಿ ಆದೇಶವಿತ್ತರು.

ಈ ಕಥೆಯನ್ನು ಹೇಳಿದವರಿಗೂ, ಕೇಳಿದವರಿಗೂ ಹಾಗೂ ಪಾಲಿಸಿದವರಿಗೂ ಶ್ರೀವರಲಂಚ ದೇವರು ಸಕಲ ಸುಖ ಸೌಭಾಗ್ಯ ಸನ್ಮಂಗಳವನ್ನು ನೀಡಲಿ, ಲೋಕಾಯುಕ್ತ ಶ್ರೀ. ವೆಂಕಟಾಚಲರವರ ದೃಷ್ಟಿ ಈ ಭಕ್ತಾದಿಗಳಮೇಲೆ ಬೀಳದಿರಲಿ ಎಂದು ಹೇಳುತ್ತಾ -

|ಜೈಮಂಗಳ ಜಯಮಂಗಳ ಶ್ರೀವರಲಂಚದೇವ|

Wednesday, August 09, 2006

ಮೆಲುಕು

ಪಟೌಡಿ, ಪ್ರಸನ್ನರವರಕಾಲ, ಐದುದಿನಗಳ ಪಂದ್ಯಾವಳಿಯ ಸಂಭ್ರಮ. ಟಿ.ವಿ. ಮುಂದೆ ಠೀವಿಯಿಂದ ಕೂಡುವ ಕಾಲವಾಗಿರಲಿಲ್ಲ. ಗುರ್ ಗುರ್ ಗುಟ್ಟುವ ಬಾನುಲಿಯ ಮುಂದೆ ಕಿವಿಗೊಟ್ಟು ಎಚ್ಚರಿಕೆಯಿಂದ ಆಲಿಸಬೇಕಾಗಿದ್ದ ಕಾಲವಾಗಿತ್ತು. ವಾಟ್ ನಾಣಿ? ವಾಟ್ ಪಾಚು? ದಟೀಸ್ ಆಲ್ ರೈಟ್ ಚಕ್ರಪಾಣಿ ಎಂದು - ಕುರುಕ್ಷೇತ್ರ ಯುದ್ಧವನ್ನು ಕುರುಡು ಧೃತರಾಷ್ಟ್ರನಿಗೆ ವರ್ಣಿಸುತ್ತಿದ್ದ ಸಂಜಯನಂತೆ- ನಮ್ಮ ಕಣ್ಣುಗಳಮುಂದೆಯೇ ಪಂದ್ಯ ನಡೆಯುತ್ತಿದೆಯೋ ಎನ್ನುವಂತೆ ಅತ್ಯುತ್ಸಾಹದಿಂದ ವರ್ಣಿಸುತ್ತಿದ್ದ ಆ ವೀಕ್ಷಕ ವಿವರಣೆಕಾರರ ಕಾಲವದು. ಸಾಮಾನ್ಯವಾಗಿ ಎಲ್ಲ ಹೋಟೆಲ್‍ಗಳ ಮುಂದೆ ಒಂದು ದೊಡ್ಡ ಗುಂಪಿರುತ್ತಿತ್ತು. ರೇಡಿಯೋ ಕಿವಿಯನ್ನು ಎಷ್ಟೇ ತಿರುವಿದರೂ, ಪಾಪ ಆ ವಿವರಣೆ, ಮುಂದೆ ನಿಂತವರಿಗೆ ಮಾತ್ರ ಸರಿಯಾಗಿ ಕೇಳಿಸುತ್ತಿತ್ತು. ಹಿಂದೆ ನಿಂತವರು ಎಗರಿ-ಎಗರಿ, ಏನಾಯ್ತಂತೆ ಎಂದು ಕಾತರದಿಂದ ಕೇಳುತ್ತಿದ್ದ ಕಾಲ. ನನ್ನಕ್ಕ ಮೂಲೆಯಲ್ಲಿದ್ದ ರೇಡಿಯೋ ಕಿವಿಯನ್ನು ತಾರಕಕ್ಕೆ ತಿರುಗಿಸುತ್ತಿದ್ದಳಲ್ಲದೆ ಟ್ರಾನ್ಸಿಸ್ಟರನ್ನು ಬೇರೆ, ಕಂಕುಳಲ್ಲಿಟ್ಟು ಕೊಂಡು ಹಾಲಿನಿಂದ ರೂಮಿಗೂ- ಅಲ್ಲಿಂದ ಅಡಿಗೆ ಮನೆಗೂ ಶತಪಥ ತಿರುಗುತ್ತಿದ್ದಳು. ಆಗ ಟ್ರಾನ್ಸಿಸ್ಟರ್ ಇನ್ನೂ ಶೈಶ್ಯಾವಸ್ಥೆಯಲ್ಲಿತ್ತು. ಅದರ ಗಾತ್ರ ಆಗಿನ ಕಾಲದ ಚಿಕ್ಕ ರೇಡಿಯೋ ಅಷ್ಟೇ ಇರುತ್ತಿತ್ತು. ಆ ಟ್ರಾನ್ಸಿಸ್ಟರಿಗೋ ಸರಿಯಾದ ಸಮಯದಲ್ಲಿ ಗಂಟಲು ಕೂತುಬಿಡುತ್ತಿತ್ತು. ಹಾಲಿಗೆ ಓಡಿಬಂದು - ರೇಡಿಯೋ ಮುಂದೆ ಏಕಾಗ್ರತೆಯಿಂದ ಕಿವಿಗೊಟ್ಟು ಕೇಳುತ್ತಿದ್ದ ಕ್ರಿಕೆಟ್ ಭಕ್ತವೃಂದದವರನ್ನು- ಏನಾಯ್ತು?- ಯಾರು ಔಟಾದ್ರು?- ಎಂದು ಆತುರದಿಂದ ಕೇಳುತ್ತಿದ್ದಳು. ನಮ್ಮಕ್ಕನ ಸಹಪಾಠಿ ಸುಮಿತ್ರಳ ಬಂಧು ಕ್ರಿಕೆಟ್ ತಂಡದಲ್ಲಿದ್ದರು. ಪಂದ್ಯ ಪ್ರಾರಂಭವಾಯ್ತೆಂದರೆ ಸುಮಿತ್ರಳನ್ನು ಹಿಡಿಯುವವರಿಲ್ಲ - ಎಂದು ನಮ್ಮಕ್ಕನ ಗೆಳತಿಯರು ಟೀಕಾಪ್ರಹಾರ ಮಾಡುತ್ತಿದ್ದರು.

ಟೆಸ್ಟ್ ಸರಣಿ ಶುರುವಾಯಿತೆಂದರೆ, ಚಿನ್ನಿದಾಂಡ್ಲು, ಗೋಲಿ, ಬುಗುರಿ, ಫುಟ್ಬಾಲ್-ಎಲ್ಲಾ ಮೂಲೆ ಸೇರುತ್ತಿದ್ದವು. ಆಗ ಏಕದಿನ ಪಂದ್ಯವಿರಲಿಲ್ಲ. ಪಾಪ ಈಗಿನ ಹಾಗೆ ಹುಡುಗರಿಗೆ ಕೋಚಿಂಗ್ ಕೋರ್ಸ್ ಕೂಡ ಇರಲಿಲ್ಲ. ಹುಡುಗರೆಲ್ಲಾ ಮುಂದಿನ ಪಟೌಡಿ, ಪ್ರಸನ್ನರು ತಾವೆ ಎನ್ನುವಂತೆ ಕನಸು ಕಾಣುತ್ತಾ, ಓಡಾಡುವಾಗಲೆಲ್ಲಾ ಬರೇ ಕೈಗಳಲ್ಲೇ ಬ್ಯಾಟಿಂಗ್, ಬೌಲಿಂಗ್ ಮಾಡುತ್ತಿದ್ದರು. ನನ್ನ ತಮ್ಮ ಈರೀತಿ ಮನೆಯಲ್ಲಿ ಬೌಲಿಂಗ್ ಪ್ರ್ಯಾಕ್ಟೀಸ್ ಮಾಡುವಾಗ, ಅಪರೂಪಕ್ಕೆ ಆಗಮಿಸಿದ್ದ ಅಜ್ಜಿಯೊಬ್ಬರು ಅಕಸ್ಮಾತ್ ಇವನಬೌಲಿಂಗ್‍ಗೆ ಅಡ್ಡ ಬಂದಾಗ ಅವರ ಕೆನ್ನೆಗೆ ಜೋರಾಗಿ ಬಾರಿಸಿದ್ದಲ್ಲದೆ ಅವರ ದವಡೆ ಹಲ್ಲು ದೊಪ್ಪಂತ ಉದುರುವಂತೆ ಮಾಡಿದ. ಕಡುಬಿನಂತೆ ಊದಿದ ಅವರ ಕೆನ್ನೆ ಯತಾಸ್ಥಿತಿಗೆ ಬರುವವರೆಗೆ ನನ್ನ ತಮ್ಮ ಎಲ್ಲರಿಂದ ಬೈಸಿಕೊಳ್ಳುತ್ತಲೇಇದ್ದ.

ನಮ್ಮ ದೇಶಕ್ಕೆ ವೆಸ್ಟ್‍ಇಂಡೀಸ್ನವರ ಆಗಮನವಾಗಿತ್ತು. ಮೊದಲ ಪಂದ್ಯಾವಳಿಯೋ, ಎರಡನೆಯದೋ ನೆನೆಪಿಲ್ಲ- ಅವರ ಬೌನ್ಸ್ ಬೌಲಿಂಗ್‍ಗೆ ನಮ್ಮ ಆಟಗಾರರು ಬೆದರಿ ಬ್ಯಾಟನ್ನು ಬಿಟ್ಟು ಬಂದುಬಿಡುತ್ತಿದ್ದಾರೆ ಎಂದು ನಮ್ಮ ತಂದೆ, ನಮ್ಮಣ್ಣಂದಿರು- ರೇಡಿಯೋ ಮುಂದೆ ಕುಳಿತು ಚರ್ಚಿಸುತ್ತಿದ್ದರು. ಒಂದು ದಿನ ಮಟ-ಮಟ ಮಧ್ಯಾಹ್ನ ಇದ್ದಕ್ಕಿದ್ದಂತೆ, ಪೆಟ್ಟು ತಿಂದ ಪ್ರಾಣಿಯಂತೆಚೀರಿ ಕೆಳಗುರುಳಿದ ರೇಡಿಯೋ ಸದ್ದನ್ನು ಕೇಳಿ, ಏನಾಯಿತೋ ಎಂದು ಗಾಭರಿಯಿಂದ ಅಡಿಗೆಮನೆಯಲ್ಲಿದ್ದ ನನ್ನ ತಾಯಿ ಹಾಲಿಗೆ ಧಾವಿಸಿ ನೋಡಿದಾಗ, ನಮ್ಮ ತಂದೆ ದೂರ್ವಾಸ ಮುನಿಯಂತೆ ರೋಷಗೊಂಡಿದ್ದಾರೆ- ಆ ಸ್ಥಿತಿಯಲ್ಲಿ ಅವರನ್ನು ಮಾತನಾಡಿಸಲು ನನ್ನ ತಾಯಿಗೆ ಧೈರ್ಯವಿರಲಿಲ್ಲ. "ಒಬ್ರಾದ್ರೆ ಸರಿ, ತುಪು ತುಪೂಂತ ಒಟ್ಟಿಗೆ ಆರುಜನ ಔಟಾದ್ರೇ - ಗೆಲ್ತಾರ ಇವ್ರು?"ಎಂದು ಸಿಡುಗುಟ್ಟುತ್ತಿದ್ದರು, ನಮ್ಮವರು ಸಾಲಾಗಿ ಒಬ್ಬರನಂತರ ಒಬ್ಬರು, ಒಂದು ರನ್ನೂ ಮಾಡ್ದೆ ಔಟಾದಾಗ. ಕಾಮೆಂಟ್ರಿ ಕೇಳುತ್ತ ಕುಳಿತಿದ್ದ ನನ್ನ ತಂದೆಗೆ ಸಿಟ್ಟು ಮುಗಿಲೇರಿ ರೇಡಿಯೋ ಮೇಲೆ ಬಲ ಪ್ರಯೋಗ ಮಾಡಿದ್ದರು. ಆಗ ಅವರನ್ನು ತಡೆಯಲು ಪಕ್ಕದಲ್ಲಿ ನನ್ನಣ್ಣಂದಿರು ಇರಲಿಲ್ಲ - ಕಾಲೇಜಿಗೆ ಹೋಗಿದ್ದರು. ನಮ್ಮಣ್ಣಂದಿರು ಪ್ರತಿ ಬುಧುವಾರ ರೇಡಿಯೋ ಸಿಲೋನಿನಿಂದ ರಾತ್ರಿ ಎಂಟುಗಂಟೆಗೆ ಬಿತ್ತರವಾಗುತ್ತಿದ್ದ ಬಿನಾಕ ಗೀತ್‍ಮಾಲ ಮಾತ್ರ ಪರೀಕ್ಷೆಯ ಸಮಯದಲ್ಲೂ ಸಹ ತಪ್ಪದೆ ಕೇಳುತ್ತಿದ್ದರು. ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ನಮ್ಮೆಲ್ಲರ ನೆಚ್ಚಿನ " ನಿಮ್ಮ ಮೆಚ್ಚಿನ ಚಿತ್ರ ಗೀತೆ"ಗಳನ್ನು ಆಲಿಸಲು ಬಹು ಉತ್ಸಾಹದಿಂದ ರೇಡಿಯೋ ಮುಂದೆ ಕಾತುರದಿಂದ ಕಾಯುತ್ತಿದ್ದೆವು. ನನ್ನ ತಂದೆಗೆ ಪ್ರಿಯವಾದುದ್ದು- ವಾರ್ತಾ ಪ್ರಸಾರ. ಆಸಮಯದಲ್ಲಿ ಮನೆಯಲ್ಲಿ ಯಾರೂ ಜೋರಾಗಿ ಮಾತನಾಡುವಂತಿರಲಿಲ್ಲ. ಪೆಟ್ಟು ತಿಂದು ಕೆಳಗೆ ಬಿದ್ದಿದ್ದ ಆ ರೇಡಿಯೋ- ಚಿಕಿತ್ಸಾಲಯಕ್ಕೆ ಹೋಗಿ, ಹಿಂತಿರುಗಲು ಹದಿನೈದು ದಿನಗಳೇ ಹಿಡಿದವು. ಅಲ್ಲಿಯವರೆಗೆ ನನ್ನಕ್ಕನ ಕಂಕುಳಲ್ಲಿ ಸದಾ ಅಲಂಕರಿಸಿದ್ದ ಆ ಟ್ರಾನ್ಸಿಸ್ಟರೇ ನಮ್ಮೆಲ್ಲರ ಕೋರಿಕೆಯನ್ನು ನೆರವೇರಿಸಬೇಕಾಗಿತ್ತು.

ಇಂತಹ ಒಂದು ಕ್ರಿಕೆಟ್ ಪಂದ್ಯಾವಳಿಯ ಸರಣಿ ಸಮಯ; ಎಲ್ಲಿ ನೋಡಿದರೂ ಕ್ರಿಕೆಟ್ ಎಂಬ ಸಾಂಕ್ರಾಮಿಕ ಜ್ವರ ಹರಡಿತ್ತು. ಆಗ ಕುಂಟೆಬಿಲ್ಲೆ ಆಡುತ್ತಿದ್ದ ನಮ್ಮ ಮುಂದೆ "ನಾವೂ ಯಾಕೆ ಕ್ರಿಕೆಟ್ ಆಡಬಾರದು?" ಎಂಬ ಪ್ರಶ್ನೆಯನ್ನು ಶಾಂತಿ ಇಟ್ಟಳು. ನಾವಾಗ ಏಳನೇ ತರಗತಿಯಲ್ಲಿದ್ದೆವು. "ಯಾಕಾಡ್ಬಾರ್ದೆ? - ಅದೇನು ಮಹಾಕಷ್ಟವಾದ ಆಟಾನಾ? - ಆಕಡೆಯಿಂದ ಬಾಲ್ ಎಸೆದರೆ ಈ ಕಡೆಯಿಂದ ಹೊಡೆಯೋದು-ಅಷ್ಟೆ. ನಾವೂ ಯಾಕೆ ಆಡ್ಬಾರ್ದು?"ಎಂಬ ಶಾಂತಿಯ ಸೂಚನೆಗೆ ಒತ್ತು ಕೊಟ್ಟಳು ಎಡಚಿ ವಸಂತ. ಅವಳು ಬರೆಯುತ್ತಿದ್ದುದ್ದು ಎಡಗೈಯಲ್ಲಿ. ಅವಳ ಎಡಗೈ ಒಂದರ ಬಲದ ಮುಂದೆ ನಮ್ಮ ಎರಡು ಕೈಗಳ ಬಲ ಏನೇನು ಅಲ್ಲ. ಅಂತಹ ಶಕ್ತಿ ಅವಳ ಎಡಗೈಯಲ್ಲಿತ್ತು.

"ನಾಳೇನೇ ಪಿ.ಟಿ. ಟೀಚರ್ ಹತ್ರ ಹೋಗಿ ಬ್ಯಾಟ್-ಬಾಲ್ ತರಿಸಿಕೊಡಿ ಅಂತ ಗಲಾಟೆ ಮಾಡೋಣ" ಗಟಾಣಿ ಎಂದು ಬಿರುದು ಪಡೆದಿದ್ದ ಗೌರಿ ಉತ್ಸಾಹದಿಂದ ಅಂದಳು. ಕುಂಟೆಬಿಲ್ಲೆ ಆಟವನ್ನು ಅರ್ಧಕ್ಕೆ ನಿಲ್ಲಿಸಿ, ಇದರ ಬಗ್ಗೆ ಯಾವರೀತಿ ಮುಂದುವರೆಯಬೇಕೆಂದು ಚರ್ಚಿಸಿದೆವು.

ಮರುದಿನ ತರಗತಿಯಲ್ಲಿ ಪಾಠದ ಕಡೆ ಗಮನ ಕೊಡದೆ ಗುಸು-ಗುಸು ಚರ್ಚಿಸುತ್ತಿದ್ದ ನಮ್ಮನ್ನು ನಿಲ್ಲಿಸಿ ಪಾಠದ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸದೆ ಹೋದೆವು. ಗಮನವಿಟ್ಟು ಪಾಠ ಕೇಳಿದ್ದರೆ ತಾನೆ ಉತ್ತರಿಸುವುದು. ಬೆಲ್ ಬಾರಿಸುವವರೆಗೂ ಬೆಂಚಿನಮೇಲೆ ನಿಂತುಕೊಂಡು ಕಾಲು ನೋಯಿಸಿಕೊಂಡೆವು. ಆ ದಿನದ ಪಾಠಗಳು ಹೇಗೋ ಮುಗಿದವು. ಕೊನೆಯ ಪೀರಿಯಡ್ಡೇ ಪಿ.ಟಿ. ಹುರುಪಿನಿಂದ ಪಿ.ಟಿ. ಟೀಚರಿದ್ದಕಡೆ ಓಡಿದೆವು. ಹತ್ತು ಹುಡುಗಿಯರು ಒಟ್ಟಿಗೆ ಮುತ್ತಿಗೆ ಹಾಕಿದ್ದು ನೋಡಿ ಅವರಿಗೆ ಆಶ್ಚರ್ಯವಾಯಿತು. ಯಾಕೆಂದರೆ ಪಿ.ಟಿ. ಪೀರಿಯಡ್ ಬಂತೆಂದರೆ ಒಂದಲ್ಲ ಒಂದು ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವುದೇ ಹೆಚ್ಚಾಗಿತ್ತು. "ಏನು- ಎಲ್ರೂ ಒಟ್ಟಾಗಿ ಬಂದ್ಬಿಟ್ಟಿದ್ದೀರಿ- ಲೈನ್ ಫಾರಂ ಮಾಡಿ" ಎಂದು ಆಜ್ಞಾಪಿಸಿದರು ಪಿ. ಟಿ. ಟೀಚರ್.

"ಸರ್ ನಮಗೆ ಬ್ಯಾಟು-ಬಾಲು ಬೇಕು" ಎಂದು ಒಕ್ಕೊರಲಿನಿಂದ ಕಿರುಚಿದೆವು.

"ಬ್ಯಾಟು-ಬಾಲು ಯಾಕೆ?" ಆಶ್ಚರ್ಯದಿಂದ ಕೇಳಿದರು.

"ಕ್ರಿಕೆಟ್ ಆಡೋಕೆ" ಅಂತೆಂದೆವು ಜೋರಾಗಿ.

"ಕ್ರಿಕೆಟ್ ಆಡೋಕೆ?"

"ಹೌದು ಸರ್- ನಾವೇನು ಕ್ರಿಕೆಟ್ ಆಡ್ಬಾರ್ದೇ? ಬರೇ ಹುಡುಗರೇ ಆಡ್ಬೇಕೂಂತ ಏನಾದ್ರೂ ರೂಲ್ಸಿದೆಯೇ?" ಗಟಾಣಿ ಗೌರಿ ಎತ್ತರದ ದನಿಯಲ್ಲಿ ಕೇಳಿದಳು.

"ಹೌದಮ್ಮ ಅದು ಹುಡುಗರ ಆಟ. ಹುಡುಗಿಯರು ಆಡಿದ್ದನ್ನು ಎಲ್ಲಾದರೂ ನೋಡಿದ್ದೀರಾ, ಇಲ್ಲ ಕೇಳೀದ್ದೀರಾ?" ಪಿ. ಟಿ . ಟೀಚರ್ ಮೆಲುದನಿಯಲ್ಲಿ ಹೇಳಿ ನಮ್ಮನ್ನು ಕಳುಹಿಸಲು ನೋಡಿದರು. ಕ್ರಿಕೆಟ್ ಹುಡುಗರ ಆಟವೆಂದೇ ತಿಳಿದಿದ್ದ ಕಾಲವದು.

"ನಾವೂ ಆಡ್ತೀವಿ ಸರ್, ಯಾಕಾಡ್ಬಾರ್ದು?" ಎಲ್ಲರೂ ಒಟ್ಟಾಗಿ ಸೂರುಹಾರಿಹೋಗುವಂತೆ ಕಿರಚಿದೆವು.

" ಥ್ರೋ ಬಾಲ್, ಷಟಲ್ಸ್, ರಿಂಗ್, ಬಾಲ್ ಬ್ಯಾಡ್ಮಿಂಟನ್, ಇನ್ನೂ ಬೇಕಾದಷ್ಟು ಹುಡುಗಿಯರು ಆಡೋ ಆಟಗಳಿವೆ. ನಿಮಗೆ ಇನ್ನೂ ಒಂದು ಥ್ರೋ ಬಾಲ್ ಕೋರ್ಟ್ ಮಾಡಿಸಿ ಕೊಡ್ತೀನಿ. ಕ್ರಿಕೆಟ್ ಬೇಡ" ಎಂದು ಉಪದೇಶ ನೀಡಿದಿರು. ನಾವು ಜಗ್ಗಲಿಲ್ಲ.

"ಸರಿ ಹೆಡ್‍ಮಾಸ್ಟರ್ ಹತ್ತಿರ ಹೋಗೋಣ- ಏನ್ಹೇಳ್ತಾರೋ ಹಾಗೆ ಮಾಡಿ" ಎಂದು ನಮ್ಮನ್ನೆಲ್ಲಾ ಕರೆದುಕೊಂಡು ಹೆಡ್‍ಮಾಸ್ಟರ್ ಮುಂದೆ ನಿಲ್ಲಿಸಿದರು.

ನಮ್ಮದು ಬಾಲಕಿಯರ ಸರ್ಕಾರಿ ಕನ್ನಡ ಮಾಧ್ಯಮಿಕ ಶಾಲೆ. ಈಗಿನಂತೆ ಹಾದಿಗೊಂದು ಬೀದಿಗೊಂದು ಇಂಗ್ಲೀಷ್ ಸ್ಕೂಲಿರಲಿಲ್ಲ. ನಮ್ಮ ಕ್ಷೇತ್ರದ ಶಾಸಕರ ಮಗಳು, ಮೀನಾಕ್ಷಿ, ನಮ್ಮ ಸಹಪಾಠಿಯಾಗಿದ್ದಳಲ್ಲದೆ ನಮ್ಮ ಗುಂಪಿನಲ್ಲಿ ಇದ್ದಳು. ಇಂದಿನ ರಾಜಕಾರಿಣಿಗಳಹಾಗೆ ಡಂಭಾಚಾರ ಅವರ ಮನೆಯವರಿಗೆ ಇರಲಿಲ್ಲ - ಬಲು ಸರಳ ಜೀವಿಗಳು. ಮೀನಾಕ್ಷಿಯ ತಾಯಿ ನಮ್ಮನ್ನೆಲ್ಲಾ ತುಂಬಾ ವಿಶ್ವಾಸ-ಪ್ರೀತಿಯಿಂದ ಕಾಣುತ್ತಿದ್ದರು. ಶಾಸಕರೂ ಸಹ ಮುಗಳ್ನಗೆಯಿಂದ ನಮ್ಮ "ಪಟಾಲಂ"ಅನ್ನು ಮಾತನಾಡಿಸುತ್ತಿದ್ದರು.

ನಮ್ಮ ಮಾಧ್ಯಮಿಕಶಾಲೆಯ ಮುಖ್ಯೋಪಾಧ್ಯಾಯರು ಬಲು ಸಾಧು ಸ್ವಭಾವದವರು. ಕಚ್ಚೆ ಪಂಚೆ, ಜುಬ್ಬ, ಕರಿ ಕೋಟು, ತಲೆಗೊಂದು ಕರಿ ಟೋಪಿ- ಇವೇ ಅವರ ಉಡುಪು. ಲೋಹದ ಕಟ್ಟಿನ ಕನ್ನಡಕ ಮೂಗಿನ ಮೇಲೆ ಸದಾ ಅಲಂಕರಿಸಿತ್ತು.
ನಮ್ಮ ಬೇಡಿಕೆಯನ್ನು ಕೇಳಿ ಮೃದುವಾಗಿ ಉಪದೇಶವನ್ನಿತ್ತರು. ನಾವು ಜಗ್ಗಲಿಲ್ಲ. ಶಾಸಕರ ಮಗಳು ಮೀನಾಕ್ಷಿಯೂ ನಮ್ಮೊಡನೆ ದನಿಗೂಡಿಸಿದ್ದಳು. ಮೀನಾಕ್ಷಿಯ ತಂದೆ ಮಂತ್ರಿಯಾಗುವ ಸಾಧ್ಯತೆಯೂ ಇತ್ತು. ಅವಳ ಪ್ರಭಾವದಿಂದಲೋ ಇಲ್ಲ ನಮ್ಮೆಲ್ಲರ ಒಗ್ಗಟ್ಟಿನ ಬಲದಿಂದಲೋ - ಒಟ್ಟಿನಲ್ಲಿ ಮರುದಿನ ನಮಗೆ ಬ್ಯಾಟು-ಬಾಲು, ವಿಕೆಟ್ಟು ಇತ್ಯಾದಿಗಳನ್ನು ಪಿ.ಟಿ. ಟೀಚರ್ ತರಿಸಿಕೊಟ್ಟರು.

ಆಡುವುದೆಲ್ಲಿ ಎಂಬ ಪ್ರಶ್ನೆ ಎದ್ದಿತು. ಪಿ.ಟಿ. ಟೀಚರ್, ಹೆಡ್ಮಾಸ್ಟರ್ "ಬ್ಯಾಟು-ಬಾಲು, ವಿಕೆಟ್ಗಳನ್ನು ಕೇಳಿದಿರಿ. ತರಿಸಿಕೊಟ್ಟಿದ್ದೀವಿ. ಫೀಲ್ಡ್ ನೀವೇ ನೋಡ್ಕೋಬೇಕು. ಪ್ರೇಯರ್ ಮಾಡೋ ಜಾಗ್ದಲ್ಲಿ, ಪಿ.ಟಿ. ಗ್ರೌಂಡ್ನಲ್ಲಿ, ಇಲ್ಲ ಥ್ರೋಬಾಲ್ ಕೋರ್ಟ್‍ನಲ್ಲಿ ನೀವು ಆಡ್ಬಾರ್ದು" ಎಂದು ಆಜ್ಞಾಪಿಸಿದರು.

ಆಗ ಶಾಲೆಯ ಮುಂದೆ ವಿಶಾಲವಾದ ಮೈದಾನವಿತ್ತು. ಅದರಲ್ಲಿ ಅರ್ಧಭಾಗದಷ್ಟು ಮಾತ್ರ ಶಾಲೆ ಉಪಯೋಗಿಸುತ್ತಿತ್ತು. ಮಿಕ್ಕ ಪ್ರದೇಶದಲ್ಲಿ ಕಲ್ಲು ಮುಳ್ಳು ಯಥೇಚ್ಛವಾಗಿತ್ತು. ಆ ಕಲ್ಲು ಮುಳ್ಳುಗಳಿಂದ ಆವೃತವಾಗಿದ್ದ ಜಾಗವನ್ನೇ ಒಪ್ಪಮಾಡಿ ನಮ್ಮ ಕ್ರಿಕೆಟ್ ಫೀಲ್ಡ್ ಮಾಡೋಣವೆಂದು ತೀರ್ಮಾನಿಸಿದೆವು.

ಮರುದಿನ ಭಾನುವಾರ, ಬೆಳಿಗ್ಗೆ ಎಂಟು ಗಂಟೆಗೆ ಏಳುವ ಸಂಪ್ರದಾಯ ಪಾಲಿಸುತ್ತಿದ್ದ ನಾನೂ ಸಹ ಬೆಳಿಗ್ಗೆ ಆರು ಗಂಟೆಗೆ ಎದ್ದು, ಏಳು ಗಂಟೆಗೆ ಹಿತ್ತಲಲ್ಲಿದ್ದ ಕತ್ತಿಯನ್ನು ಪೇಪರಿನಲ್ಲಿ ಸುತ್ತಿಕೊಂಡು ಹೊರಟೆ. ಶಾಂತಿ ಹಳೇ ಬಿದಿರು ಬುಟ್ಟಿ ತಂದಳು. ವಸಂತಳ ಕೈಯಲ್ಲಿ ಪೊರಕೆ ಇತ್ತು. ಹೀಗೆ ಒಬ್ಬೊಬ್ಬರೂ ಒಂದೊಂದನ್ನು ಹಿಡಿದುಕೊಂಡು, ಶ್ರಮದಾನಕ್ಕೆ ಹೊರಟ ಶ್ರಮ ಜೀವಿಗಳಂತೆ ತೆರಳಿದೆವು. ಸಬೂಬಿನಿಂದ ದೂರ‍ಉಳಿಯಲು ಯತ್ನಿಸಿದ ಸೋಮಾರಿ ಸರೋಜಳನ್ನು ಎಳೆದುಕೊಂಡು ಹೊರಟೆವು. ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಪುನಃ ನಮ್ಮ ಕ್ರಿಕೆಟ್ ಫೀಲ್ಡ್ ತಯಾರಿಗೆ ಪಾದ ಬೆಳೆಸಿದೆವು. ಸುಸ್ತಾಗಿ ಸಾಯಂಕಾಲ ಮನೆಗೆ ಬಂದು ಸೇರಿದಾಗ ಆರಾಗಿತ್ತು.

ಮಾರನೆಯದಿನ ಸೋಮವಾರ. ಶಾಲಾಸಮಯದನಂತರ ನಮ್ಮ ಆಟ ಅತ್ಯುತ್ಸಾಹದಿಂದ ಆರಂಭವಾಯಿತು. ನಾವು ಹತ್ತುಜನ ಹುಡುಗಿಯರು- ಎರಡು ಟೀಮ್ ಮಾಡಿಕೊಂಡೆವು. ಒಂದು ಟೀಮಿಗೆ ಶಾಂತಿ ಕ್ಯಾಪ್ಟನ್ ಎಂದು ಸರ್ವಾನುಮತದಿಂದ ಆಯ್ಕೆ ಮಾಡಿದ್ದೆವು. ಅವಳಣ್ಣ ರಣಜಿ ಆಟಗಾರ ಆಗಿದ್ದುದರಿಂದ, ಶಾಂತಿ ಕ್ರಿಕೆಟ್ ಕಾನೂನುಗಳನ್ನು ಚೆನ್ನಾಗಿ ತಿಳಿದುಕೊಂಡಿರುವ ಪ್ರವೀಣೆ ಎಂಬುದು ನಮ್ಮೆಲ್ಲರ ಅನಿಸಿಕೆ. ಮತ್ತೊಂದು ಟೀಮಿಗೆ ಗಟಾಣಿ ಗೌರಿ ಕ್ಯಾಪ್ಟನ್ ಎಂದು ತೀರ್ಮಾನಿಸಿದೆವು. ಯಾಕೆಂದರೆ ಅವಳ ಜೋರಿಗೆ ನಾವು ತಲೆ ಬಾಗಿಸುತ್ತಿದ್ದೆವು. ಹೀಗೆ ಎರಡು ಟೀಮುಗಳಾದವು. ಟಾಸ್ ಹಾಕಿ ಆಟ ಪ್ರಾರಂಭಿಸಿಯೇಬಿಟ್ಟೆವು. ಶಾಂತಿ ಟಾಸ್ ಗೆದ್ದು ಬ್ಯಾಟಿಂಗ್ ಎಂದಳು. ನಾನು ಗೌರಿಯ ಕಡೆ ಇದ್ದೆ. ಕ್ಯಾಪ್ಟನ್ಸ್‍ಗಳಿಂದಲೇ ಆಟ ಶುರುವಾಗಲಿ ಎಂಬ ತೀರ್ಮಾನಕ್ಕೆ ಬಂದೆವು. ಶಾಂತಿ ಬ್ಯಾಟಿಂಗ್ - ಗೌರಿ ಬೌಲಿಂಗ್. ನಮ್ಮ ಟೀಮಿನ ಇತರೆ ನಾಲ್ವರು ಫೀಲ್ಡಿಂಗ್ ಮಾಡಲು ನಿಂತೆವು. ಈಗಿನ ಕಾಲದ ಹುಡುಗಿಯರಂತೆ ಚೂಡಿದಾರ, ಜೀನ್ಸ್ ಪ್ಯಾಂಟ್ ಇತ್ಯಾದಿ ಉಡುಪುಗಳನ್ನು ಕಂಡವರಲ್ಲ. ಜೊತೆಗೆ ಶಾಲೆಯಲ್ಲಿ ಸಮವಸ್ತ್ರದ ಕಾನೂನೂ ಇರಲಿಲ್ಲ. ನಾವೆಲ್ಲರೂ ಲಂಗ, ಬ್ಲೌಸ್‍ನವರು. ಅಂದಿನ ಪದ್ಧತಿಯಂತೆ ಲಂಗ ಹಿಮ್ಮಡಿಯವರೆಗೂ ಇರಬೇಕಿತ್ತು. ಓಡುವಾಗ ಕಾಲಿಗೆ ತೊಡರುತ್ತಿದ್ದ ಲಂಗವನ್ನು ಮಡಚಿ ಪಿನ್ನಿನಿಂದ ಸಿಕ್ಕಿಸಿ ಉದ್ದವನ್ನು ಕಡಿಮೆಮಾಡಿಕೊಂಡು, ವೀರಮಹಿಳೆ ಕಿತ್ತೂರು ಚೆನ್ನಮ್ಮನಂತೆ ನಿಂತೆವು. ಬಾಬ್‍ಕಟ್ ಬಾಯ್‍ಕಟ್‍ಗೆ ನಿಷೇಧವಿದ್ದ ನಮ್ಮಕಾಲದಲ್ಲಿ ಪ್ರತಿದಿನ ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿ ಬಿಗಿಯಾಗಿ ಎರಡು ಜಡೆಗಳನ್ನು ಹೆಣೆದು - ಜಡೆಗಳ ತುದಿಗೆ ಕರಿ ಟೇಪನ್ನು ಕಟ್ಟುತ್ತಿದ್ದರು ನನ್ನತಾಯಿ. ಎಷ್ಟೋಸಲ ಎಣ್ಣೆ, ಮುಖದ ಮೇಲೂ ಇಳಿಯುತ್ತಿತ್ತು. ಶಾಂತಿಯ ಎರಡು ಉದ್ದನೆ ಜಡೆಗಳು ಮಂಡಿಯ ವರೆವಿಗೂ ತೂಗಾಡುತ್ತಿದ್ದವು. ಆಟಕ್ಕೆ ಅಡಚಣೆಯಾಗುತ್ತದೆಂದು ಜಡೆಗಳನ್ನು ಮೇಲಕ್ಕೆ ಕಟ್ಟಿ ಗಂಟುಹಾಕಿದ್ದಳು.

ಶಾಂತಿಯ ಸೊಂಪು ಕೂದಲು- ನೋಡಿದವರ ಕಣ್ಣು ಸೆಳೆಯುತ್ತಿತ್ತು. ಆ ಸೊಂಪು ಕೂದಲನ್ನು ಇಳಿಬಿಟ್ಟು ಕೊಂಡು ಅಕ್ಕಮಹಾದೇವಿಯ ಪಾತ್ರ ಮಾಡಿ ಆಕೆಯ ವಚನವನ್ನು ಸುಶ್ರಾವ್ಯ ವಾಗಿ ಹಾಡಿ ಅಂತರ ಶಾಲಾ ವೇಷ-ಭೂಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗಿಟ್ಟಿಸಿ ಶಾಲೆಯ ಘನತೆಯನ್ನು ಹೆಚ್ಚಿಸಿದ್ದಳು. ಅವಳಿಗೆ ತರಬೇತಿ ನೀಡಿದ್ದ ಕನ್ನಡ ಟೀಚರ್ ಲಕ್ಷಮ್ಮ ಹೆಮ್ಮೆಯಿಂದ ಅವಳ ಬೆನ್ನು ತಟ್ಟಿದ್ದರು. ಅವಳ ಸೊಂಪು ಕೂದಲನ್ನೇ ಮನದಲ್ಲಿಟ್ಟುಕೊಂಡು ಲಕ್ಷಮ್ಮನವರು "ಅಶೋಕವನದಲ್ಲಿ ಸೀತೆ"ಎಂಬ ನಾಟಕವನ್ನು ರಚಿಸಿ ನಮ್ಮೆಲ್ಲರಿಂದ ಮಾಡಿಸಿದ್ದರು. ಅಶೋಕ ವನದಲ್ಲಿ ಶ್ವೇತ ಧಾರಿಣಿಯಾಗಿ - ಕೂದಲನ್ನು ಬೆನ್ನು, ಹೆಗಲು ಮತ್ತು ತೊಡೆಯಮೇಲೆ ಹರಿಸಿಕೊಂಡು ಮರದ ಕೆಳಗೆ ಚಿಂತಾಕ್ರಾಂತಳಾಗಿ ಕುಳಿತಿದ್ದಾಳೆ ಸೀತೆಯ ಪಾತ್ರಧಾರಿ ಶಾಂತಿ. ನಾಲ್ಕು ಹುಡುಗಿಯರನ್ನು ಸೀತೆಯ ಸುತ್ತಲೂ - ಸಖಿಯರಂತೆ ನಿಲ್ಲಿಸಿದರು. ಆ ಸಖಿಯರಲ್ಲಿ ನಾನೂ ಒಬ್ಬಳಿದ್ದೆ. ರಾಮ ಭಕ್ತ ಹನುಮಂತ ಹಾರಿ ಬರುತ್ತಾನೆ. ಗೌರಿ ಆ ಪಾತ್ರದಿಂದ ಎಲ್ಲರ ಮೆಚ್ಚುಗೆ ಪಡೆದಳು. ನಾವು ಹನುಮಂತನ ರೂಪವನ್ನು ನೋಡಿ ಬೆದರಿ ಓಡಬೇಕಿತ್ತು - ಓಡಿದೆವು. ನಂತರ ಹನುಮಂತ-ಸೀತೆಯರ ಸಂಭಾಷಣೆ ಮುಂದುವರೆಯಿತು. ನಾಟಕ ಬಲು ಸೊಗಸಾಗಿ ಮೂಡಿ ಬಂತು. ನಾಟಕ ಮುಗಿದ ನಂತರ ಪ್ರೇಕ್ಷಕರೊಬ್ಬರು ಬಂದು - ಶಾಂತಿಯ ಕೂದಲನ್ನು ನೇವರಿಸಿ - ಅವಳ ಸೊಂಪು ಕೂದಲು ಕೃತಕವಲ್ಲ, ನೈಜ ಎಂಬುದನ್ನು ಧೃಡ ಪಡಿಸಿಕೊಂಡರು.

ಆಟವಾಡಲು ನಾವೆಲ್ಲರೂ ಸೈನಿಕರಂತೆ ಸಜ್ಜಾದೆವು. ಗೌರಿ ಓಡಿ ಬಂದು ಬಾಲ್ ಬೀಸಿದಳು- ಶಾಂತಿ ಅದನ್ನು ಬಾರಿಸಿದ ರಭಸಕ್ಕೆ ಆ ಬಾಲು ಮೇಲೆ ಹಾರಿ ಎಲ್ಲೋ ಅಡಗಿಕೊಂಡಿತು. ಫೀಲ್ಡ್ ಮಾಡುವವರು ಹುಡುಕಿ ತರಬೇಕು ಎಂದು ಆಜ್ಞಾಪಿಸಿದರು. ಪೊಟರೆಯಲ್ಲಿದ್ದ ಆ ಬಾಲನ್ನು ತರುವವರೆಗೂ ಶಾಂತಿ - ವಸಂತ ಆ ಕಡೆಯಿಂದ- ಈ ಕಡೆಗೆ, ಈ ಕಡೆಯಿಂದ-ಆ ಕಡೆಗೆ ಓಡಿ, ರನ್ಸ್ ಮಾಡುತ್ತಲೇ ಇದ್ದರು. ಒಟ್ಟಿಗೆ ಇಪ್ಪತ್ತು ರನ್‍ಗಳನ್ನು ಪೇರಿಸಿಬಿಟ್ಟರು. ಮತ್ತೊಂದುಸಲ ಗೌರಿಯ ಬಾಲು "ಓಡಲಾರೆ" ಎಂದು ಹಟ ಹಿಡಿದು ಕುಳಿತುಬಿಟ್ಟಿತು. ಹತ್ತು ಬೌಲಿಂಗ್ ಅವರದಾದನಂತರ "ನಮ್ಮ ಟೀಮ್ ಬ್ಯಾಟಿಂಗ್" ಎಂದು ಜೋರು ಮಾಡಿದೆವು.

ವಸಂತ ಎಡಗೈ‍ಯಿಂದ ಬೌಲ್ ಮಾಡಲು ಹೊರಟಾಗ, ಎಡಗೈ‍ಯಿಂದ ಬೌಲ್ ಮಾಡುವಂತಿಲ್ಲ ಎಂದು ನಮ್ಮ ಟೀಮಿನವರು ಪ್ರತಿಭಟಿಸಿದೆವು. ಕ್ಯಾಪ್ಟನ್ ಶಾಂತಿ ಬೌಲ್ ಮಾಡಿದಳು. ಗೌರಿ ಬಲು ಸೂಕ್ಷ್ಮದಿಂದ ಬ್ಯಾಟ್ ಮಾಡಿದಳು. ಆ ಬಾಲು ಅವಳ ಮುಂದೆ ನಮ್ರತೆಯಿಂದ ನಿಂತುಬಿಟ್ಟಿತು. ನಮ್ಮ ಟೀಮಿನವರು ಹತ್ತು ರನ್ನುಗಳನ್ನೂ ಮಾಡದೇ ಹೋದೆವು. "ಔಟ್" ಎಂದರೆ ನಮಗೆ ಗೊತ್ತಿದ್ದುದ್ದು ಎರಡೇ- ಒಂದು ಕ್ಯಾಚು, ಮತ್ತೊಂದು ಬೋಲ್ಡು.

ಮರುದಿನ ಶಾಂತಿ, ತನ್ನ ಅಣ್ಣನಿಂದ ಕ್ರಿಕೆಟ್ ಆಟದಬಗ್ಗೆ ಮಾಹಿತಿಗಳನ್ನು ತಂದಳು. "ಎಡಗೈ‍ಯಿಂದ ಬೌಲ್ ಮಾಡ್ಬಹುದಂತೆ - ಚೆಂಡು ಬೌಂಡರಿ ದಾಟಿದಮೇಲೆ ರನ್ನುಗಳನ್ನು ಓಡುತ್ತಾ ಪೇರಿಸುವಂತಿಲ್ಲವಂತೆ- ಟೀಮು ಮಾಡುವುದೇನು ಬೇಕಿಲ್ಲವಂತೆ" ಇತ್ಯಾದಿ. ಶಾಂತಿಯ ಈ ಮಾಹಿತಿಗಳನ್ನು ಅಂಗೀಕರಿಸಿದೆವು.

ವಸಂತಳ ಎಡಗೈ ರಭಸದ ಬೌಲಿಂಗ್‍ಗೆ ಗೌರಿ ನಡುಗಿ ತತ್ತರಿಸಿ ಪಕ್ಕಕ್ಕೆ ಸರಿದಳು - ಚೆಂಡು ವಿಕೆಟನ್ನು ಉರುಳಿಸಿತು.

ಸದಾ ಕ್ರಿಕೆಟ್ ಕನಸನ್ನು ಕಾಣುತ್ತಾ ಓದನ್ನು ಪಕ್ಕಕ್ಕೆ ತಳ್ಳಿದೆವು. ತರಗತಿಗಳಲ್ಲೂ ಪಾಠಗಳಮೇಲೆ ಗಮನ ಕೊಡುತ್ತಿರಲಿಲ್ಲ. ನಮ್ಮೂರಿನ ಮತ್ತೊಂದು ದಿಕ್ಕಿನ ಶಾಲೆಯಲ್ಲಿ ಓದುತ್ತಿದ್ದ ನಮ್ಮ ಸೋದರಮಾವನ ಮಗಳು ರಮಾಳಿಗೂ ಕ್ರಿಕೆಟ್ ಹುಚ್ಚು ಹಿಡಿಸಿದೆ. "ನಮ್ಮ ಸ್ಕೂಲಿನಲ್ಲೂ ಸ್ಟಾರ್ಟ್ ಮಾಡ್ತೀವಿ. ನಮ್ಮ ಸ್ಕೂಲಿಗೂ-ನಿಮ್ಮಸ್ಕೂಲಿಗೂ ಮ್ಯಾಚ್ ಇಡಬಹುದು ಎಂದು ಭವಿಷ್ಯದ ಬಗ್ಗೆ ಹೇಳಿ ಹೋದಳು.

ನಮ್ಮ ಶಾಲೆಯ ಮುಂದೆ ಇದ್ದ ಬಾಲಕರ ಸರ್ಕಾರಿ ಪ್ರೌಢ ಶಾಲೆಯ ಹುಡುಗರು - "ನೋಡೋ ಹುಡುಗಿಯರು ಕ್ರಿಕೆಟ್ ಆಡ್ತಿದ್ದಾರೆ" ಎಂದು ಗೇಲಿ ಮಾಡಿದರು. ಮೂಲೆಮನೆ ಶಾಸ್ತ್ರಿಗಳ ಮಗ ಮಂಜು ಆ ಹುಡುಗರ ಮುಂದಾಳಾಗಿದ್ದ. ನಮ್ಮ ಗುಂಪಿನ ಗಟಾಣಿ ಗೌರಿ "ಬರೇ ಹುಡುಗರು ಆಡ್ಬೇಕು ಅಂತ ಕಾನೂನಿದೆಯೇ- ಹೋಗಿ ಹೋಗಿ" ಎಂದು ಅಬ್ಬರಿಸಿದಳು. ಹುಡುಗರು ಮರುಮಾತಾಡದೆ ಜಾಗ ಖಾಲಿಮಾಡಿದರು.

ಬ್ಯಾಟಿಂಗ್‍ನಲ್ಲಿ ಶಾಂತಿ ಪ್ರವೀಣೆಯ ಪಟ್ಟ ಪಡೆದಳು. ಎಡಗೈ ವಸಂತಳ ಬೌಲಿಂಗ್ ಬೆಸ್ಟ್ ಎಂದರು. ನಾನು ಕ್ಯಾಚ್ ಹಿಡಿಯುವುದರಲ್ಲಿ ನಿಪುಣೆ ಎಂದೆನ್ನಿಸಿಕೊಂಡೆ. ಸರೋಜಳ ಬ್ಯಾಟಿಂಗ್ ಮಹಿಮೆ ಏನೆಂದರೆ- ಬಾರಿಸಿದರೆ ಸಿಕ್ಸರ್, ಇಲ್ಲ ಮೊದಲಬಾಲಿಗೇ ಕ್ಲೀನ್ ಬೌಲ್ಡ್. ಅವಳ ಬಗ್ಗೆ ಯಾವ ಭರವಸೆಯನ್ನೂ ಇಟ್ಟುಕೊಳ್ಳಬಾರದೆಂದು ನಮ್ಮನಾಯಕಿ ಶಾಂತಿಯ ತೀರ್ಮಾನ.

ನಮ್ಮ ಕ್ರಿಕೆಟ್ ಆಟ ಸುಮಾರು ಒಂದು ತಿಂಗಳ ಕಾಲ ಸಾಗಿತು. ರಮಾಳ ಶಾಲೆಯ ವಿರುದ್ಧ ಆಡುವ ಪಂದ್ಯದ ಬಗ್ಗೆ ಆಗಾಗ್ಗೆ ಚರ್ಚಿಸುತ್ತಿದ್ದೆವು.

ಅದೊಂದು ಸಂಜೆ ಶಾಲೆ ಮುಗಿದನಂತರ ಆಟ ಆಡುತ್ತಿದ್ದೆವು. ವಸಂತಳ ಎಡಗೈ ಬೌಲಿಂಗ್, ಸರೋಜಳ ಬ್ಯಾಟಿಂಗ್ - ಸರೋಜ ಸಿಕ್ಸರ್ ಬಾರಿಸಿಯೇಬಿಟ್ಟಳು. ಎಲ್ಲರೂ "ಓ" ಎಂದು ಉದ್ಗರಿಸಿದೆವು. ಶಾಂತಿ ಚೆಂಡು ತರಲು ಜಿಂಕೆಯಂತೆ ಓಡಿದಳು. ದಾರಿಯಲ್ಲಿ ಕಲ್ಲಿತ್ತು. ನೋಡದೆ ಎಡವಿ ಬಿದ್ದಳು. ಅವಳತ್ತ ಎಲ್ಲರೂ ಧಾವಿಸಿದೆವು. ಕಾಲಿಗೆ ಪೆಟ್ಟು ಬಿದ್ದಿತ್ತು- ಕಾಲು ಅಲ್ಲಾಡಿಸಲಾಗುತ್ತಿರಲಿಲ್ಲ. ನೋವಿನಿಂದ ಜೋರಾಗಿ ಅಳತೊಡಗಿದಳು. ಸರೋಜ ಓಡಿಹೋಗಿ ಹೆಡ್‍ಮಾಸ್ಟರ್‌ಗೆ ಸುದ್ದಿ ಮುಟ್ಟಿಸಿದಳು. ಹೆಡ್‍ಮಾಸ್ಟರ್, ಪಿ.ಟಿ. ಟೀಚರ್ - ಧಾವಿಸಿ ಬಂದು ನೋಡಿ - ಮೂಳೆ ಮುರಿದಿರಬಹುದೆಂದರು. ಹತ್ತಿರವೇ ಇದ್ದ ಡಾಕ್ಟರ್ ಷಾಪಿಗೆ ರಿಕ್ಷಾದಲ್ಲಿ ಕರೆದುಕೊಂಡು ಹೊರಟರು. ಆಗಿನ ಕಾಲದಲ್ಲಿ ರಿಕ್ಷಾಗಳು ತುಂಬಾ ವಿರಳವಾಗಿದ್ದವು. ಜಟಕಾ ಗಾಡಿಗಳೇ ಜಾಸ್ತಿ ಇದ್ದವು. ನಮ್ಮ ಗುಂಪು ಹಿಂಬಾಲಿಸಿತು. ಆ ಡಾಕ್ಟರ್ ಶಾಂತಿಯನ್ನು ಪರೀಕ್ಷಿಸಿ - "ಬಲಗಾಲಿನ ಮೂಳೆ ಮುರಿದಿದೆ - ಕೂಡ್ಲೆ ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗಿ" ಎಂದು ಸಲಹೆಯನ್ನಿತ್ತರು. ಈಗಿನಹಾಗೆ ಬೀದಿಗೆರಡು ನರ್ಸಿಂಗ್ ಹೋಂಗಳಿರುತ್ತಿರಲಿಲ್ಲ. ಆಗ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸ ಬೇಕಿತ್ತು. ಶಾಂತಿಯ ಮನೆಗೆ ಸುದ್ದಿ ಮುಟ್ಟಿ - ಅವರಮನೆಯವರೆಲ್ಲರೂ ಆತರದಿಂದ ಓಡಿಬಂದರು. ಶಾಂತಿಯನ್ನು ದೊಡ್ಡಾಸ್ಪತ್ರೆಗೆ ಟ್ಯಾಕ್ಸಿಯಲ್ಲಿ ಕರೆದುಕೊಂಡು ಹೋದರು. ನಾವು ಈ ಘಟನೆಯಿಂದ ಕುಗ್ಗಿ ಹೋದೆವು.

ನಾನು ಮನೆಸೇರುವಷ್ಟರಲ್ಲಿ, ಶಾಲೆಯಲ್ಲಿ ನನಗಿಂತ ಒಂದುವರ್ಷ ಮುಂದಿದ್ದ ನೆರೆಮನೆಯ ಶಾಲಿನಿ, ನನ್ನ ತಾಯಿಗೆ ಸವಿಸ್ತಾರವಾಗಿ ಅಂದಿನ ಘಟನೆಯನ್ನು ವರದಿ ಮಾಡಿದ್ದಳು. ನನ್ನನ್ನು ಕಂಡೊಡನೆ ನನ್ನ ತಾಯಿ ಸಿಟ್ಟಿನಿಂದ "ಓದೋದು ಬಿಟ್ಟು, ಕ್ರಿಕೆಟ್ ಅಂತ ಕುಣಿದಾಡ್ತಿದ್ದೀರಲ್ಲಾ, ಏನು ಇಂಟರ್ನ್ಯಾಷನಲ್ ಮ್ಯಾಚ್‍ಗೆ ಹೊರಟಿದ್ದೀರ? ಈ ಸಲ ಟೆಸ್ಟ್‍ನಲ್ಲಿ ಎಷ್ಟು ಮಾರ್ಕ್ಸ್ ಬಂದಿದೆ ನೋಡಿದ್ಯಾ? ಆ ಶಾಂತಿ ಬೇರೆ ಬಿದ್ದು ಕಾಲು ಮುರಿದುಕೊಂಡಿದ್ದಾಳೆ. ನಾಳೆಯಿಂದ ಕ್ರಿಕೆಟ್ ಆಡೋದಿಕ್ಕೆ ಹೋದ್ರೆ ನಾನೇ ನಿನ್ನ ಕಾಲು ಮುರೀತೀನಿ" ಅಂತ ಬೈದ್ರು.

ಪ್ರತಿ ತಿಂಗಳ ಗಣಿತದ ಟೆಸ್ಟ್‍ನಲ್ಲಿ ನಾನೇ ಮೊದಲಿರುತ್ತಿದ್ದೆ. ಕ್ರಿಕೆಟ್ ಕನಸಿನಿಂದ ಪಾಠಗಳನ್ನು ಪಕ್ಕಕ್ಕೆ ತಳ್ಳಿದ್ದೆವು. ಹಾಗಿರುವಲ್ಲಿ ಟೆಸ್ಟ್‍ನಲ್ಲಿ ಉತ್ತಮ ಅಂಕಗಳನ್ನು ಪಡೆಯುವುದಾದರೂ ಹೇಗೆ? ಎಲ್ಲಾ ವಿಷಯಗಳಲ್ಲೂ ಕಡಿಮೆ ಅಂಕಗಳು ಬಂದಿದ್ದವು.

ಆ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ. ಶಾಂತಿಯ ಅಳುಮುಖವೇ ಕಣ್ಣ ಮುಂದಿತ್ತು. ಅವಳನ್ನು ನೋಡಬೇಕೆಂಬ ತವಕದಿಂದ ಮರುದಿನ ಬೆಳಿಗ್ಗೆ ಒಂದುಗಂಟೆ ಮುಂಚೆಯೇ ಶಾಲೆಗೆ ಹೋಗಲು ತಯಾರಾದೆ. "ಏನು ಇಷ್ಟು ಬೇಗ ಹೊರ‍ಡ್ತಿದೀಯ?" ಎಂದು ನನ್ನ ತಾಯಿ ಪ್ರಶ್ನಿಸಿದರು. "ಗೌರೀ ಜತೇಲಿ ಕಂಬೈಂಡ್ ಸ್ಟಡೀ ಮಾಡ್ತೀನಿ" ಎಂದು ದಿಢೀರ್ ಸುಳ್ಳು ಹೇಳಿ ಹಿಂದಿನ ಬೀದಿಯಲ್ಲೇ ಇದ್ದ ಗೌರಿ ಮನೆಗೆ ಓಡಿದೆ. ಐದು ಗಂಡು ಮಕ್ಕಳ ನಂತರ ಗೌರಿ ಹುಟ್ಟಿದುದರಿಂದ ಅವರ ಮನೆಯವರೆಲ್ಲರ ಮುದ್ದಿನ ಕಣ್ಮಣಿ ಆಗಿದ್ದಳು. ಗೌರಿ ಸಹ ನನ್ನಂತೆಯೇ ಶಾಂತಿಯನ್ನು ನೋಡಬೇಕೆಂದು ಕಾತುರದಿಂದ ಇದ್ದಳು. ಈಗಿನಂತೆ ಆಗ ಎಲ್ಲರ ಮನೆಯಲ್ಲಿ ದೂರವಾಣಿಗಳಿರಲಿಲ್ಲ. ಈಗ ಎದರು ಮನೆಯವರೊಡನೆ ವಿಚಾರ ವಿನಿಮಯವನ್ನು ಸಹ ದೂರವಾಣಿಯ ಮೂಲಕ ಮಾಡುವುದುಂಟು. ಇತ್ತೀಚೆಗಂತೂ ಯಾರ ಕೈಯಲ್ಲಿ ನೋಡಿದರೂ ಮೊಬೈಲ್‍ಫೋನು.

"ವಸಂತಾನೂ ಬರ್ತಾಳೇನೋ ನೋಡೋಣ" ಎಂದಳು ಗೌರಿ

ಶಾಂತಿಯ ಮನೆಗೆ ಹೋಗುವ ದಾರಿಯಲ್ಲಿ ವಸಂತಳ ಮನೆ. ಮನೆ ಮುಂದೆ "ಕೆ.ಟಿ.ವೇಣುಗೋಪಾಲ್, ಬಿ.ಎ.,ಬಿ.ಎಲ್., ಅಡ್ವೊಕೇಟ್" ಎಂಬ ಬೋರ್ಡು ಇದ್ದಿತಾದರೂ - ಲಾಯರ್ ಕನಕಮ್ಮನವರ ಮನೆ ಎಂದೇ ಸುತ್ತ ಮುತ್ತಲಿನವರು ಕರೆಯುತ್ತಿದ್ದುದು. "ಲಾಯರ್ ವೇಣುಗೋಪಾಲ್ ಬದಲು ಅವರ ಹೆಂಡತಿ ಕನಕಮ್ಮ ಕೋರ್ಟಿಗೆ ಹೋದರೆ ಜೋರಾಗಿ ವಾದ ಮಾಡಿ ಕೇಸನ್ನು ಗೆಲ್ತಾರೆ" ಎಂದು ಅವರ ಪರಿಚಯದವರು ಹೇಳುತ್ತಿದ್ದರು.

ವಸಂತಳ ಮನೆಯ ಬಾಗಿಲು ಮೆಲ್ಲಗೆ ತಟ್ಟಿದೆವು. ವಸಂತಳ ತಾಯಿ ಬಾಗಿಲು ತೆರೆದು- ನಮ್ಮನ್ನು ನೋಡಿದೊಡನೆ "ಒಬ್ಬಳು ಕಾಲು ಮುರ್ಕೊಂಡಿರೋದು ಸಾಲ್ದಾ. ಹೋಗ್ರೆ- ಇನ್ಮೇಲೆ ವಸಂತ ನಿಮ್ಮ ಜೊತೆ ಸೇರೋಲ್ಲ" ಎಂದು ಗದರಿಸಿ ದಡಾರೆಂದು ಬಾಗಿಲು ಮುಚ್ಚಿದರು.

"ಲಾಯರ್ ಕನಕಮ್ಮಾಂತ ಸರಿಯಾಗಿ ಹೇಳ್ತಾರೆ. ಏನು ನಾವೇನು ಶಾಂತಿ ಬಿದ್ದು ಕಾಲು ಮುರ್‍ಕೊಳ್ಲೀಅಂತ ಆಸೆ ಪಟ್ಟಿದ್ವ? ಈ ವಸಂತನ್ನ ನಮ್ಮ ಜೊತೆ ಆಟ ಆಡೂಂತ ಕರೆದಿದ್ವಾ?" ಎಂದು ಗೌರಿ ಗೊಣಗುಟ್ಟಿದಳು. ನಂತರ ನಾವಿಬ್ಬರೂ ಶಾಂತಿಯಮನೆಗೆ ಹೋದೆವು.

ನಮ್ಮಿಬ್ಬರನ್ನೂನೋಡಿ ಮಂಚದಮೇಲೆ ಕಾಲುಚಾಚಿ ಕುಳಿತಿದ್ದ ಶಾಂತಿಯ ಮುಖವರಳಿತು. ಬಲಗಾಲಿಗೆ ಪೂರಾ ಪ್ಲಾಸ್ಟರ್ ಹಾಕಿದ್ದರು. "ಒಂದು ತಿಂಗಳು ಈ ಪ್ಲಾಸ್ಟರ್ ಇರಬೇಕಂತೆ - ಒಂದು ತಿಂಗಳು ಸ್ಕೂಲಿಗೆ ಬರೋದಿಕ್ಕಾಗೋದಿಲ್ರೇ- ನೀವೇ ದಿನಾ ಮನೇಗೆ ಹೋಗೋವಾಗ ಬಂದು ಹೋಗಿ. ಬರೆದಿರೋ ನೋಟ್ಸ್ ಕೊಡಿ. ಬರೆದುಕೊಳ್ತೀನಿ" ಎಂದು ಮೃದುವಾಗಿ ಕೇಳಿದಳು. ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದವಳು. ಅವಳ ಅಸಹಾಯಕ ಸ್ಥಿತಿಯನ್ನು ಕಂಡು ನಮಗೆ ಅಳು ಬಂತು.

"ಯಾಕಳ್ತೀರಿ, ನಂಗೇನೂ ಆಗಿಲ್ಲ. ಚಿಕ್ಕವಯಸ್ಸಿನವರಿಗೆ ಮೂಳೆ ಮುರಿದರೆ ಬೇಗ ಕೂಡುತ್ತಂತೆ" ಎಂದು ನಮಗೇ ಸಮಾಧಾನ ಹೇಳಿದಳು.

ಅಲ್ಲೇ ಇದ್ದ ಅವಳ ತಾಯಿ "ಸಧ್ಯ ನಮ್ಮ ಪುಣ್ಯ, ಕಾಲಿನ ಮೂಳೆ ಮುರಿದಿದೆ. ತಲೆಗೇನಾದರೂ ಪೆಟ್ಟು ಬಿದ್ದಿದ್ದರೆ- ಗತಿ ಏನು? ಓಡುವಾಗ ಕಲ್ಲು-ಮುಳ್ಳುಗಳ ಮೇಲೆ ಗಮನ ಕೊಡಬೇಕು. ಒಂದು ತಿಂಗಳು ಅವಳು ಸ್ಕೂಲಿಗೆ ಬರೋದಿಕ್ಕೆ ಆಗೋಲ್ಲ. ಅವಳಿಗೂ ಬೇಜಾರಾಗುತ್ತೆ. ನೀವು ಆಗಾಗ ಬರ್ತಿರಿ" ಎಂದರು. ಶಾಂತಿಯ ಅಮ್ಮ ಏನಂತಾರೋ ಅನ್ನುವ ಅಳುಕು ನಮಗಿತ್ತು. ಆದರೆ ಅವರು ನಮ್ಮನ್ನು ಮೊದಲಿನಂತೆಯೇ ಪ್ರೀತಿಯಿಂದ ಮಾತನಾಡಿಸಿದರು.

ನಮ್ಮ ಕ್ರಿಕೆಟ್ ನಾಯಕಿ ಹಾಗೂ ಸ್ಪೂರ್ತಿ ಶಾಂತಿಯ ಗೈರು ಹಾಜರಿಯಿಂದ ಉತ್ಸಾಹ ತಣ್ಣಗಾಯಿತು. ಪ್ರತಿ ದಿನ ಶಾಲೆ ಮುಗಿದನಂತರ ಮನೆಗೆ ಹಿಂದಿರುಗುವಾಗ ಶಾಂತಿಯ ಮನೆಗೊಮ್ಮೆ ಭೇಟಿ ಮಾಡಿ, ಅಂದಿನ ನೋಟ್ಸನ್ನು ಅವಳಿಗಿತ್ತು - ಅವಳತಾಯಿ ಕೊಡುತ್ತಿದ್ದ ತಿಂಡಿಯನ್ನು ಭುಂಜಿಸಿ ಮನೆಗೆ ಹಿಂತಿರುಗುತ್ತಿದ್ದೆವು. ಪರೀಕ್ಷೆ ಹತ್ತಿರ ಬಂದುದರಿಂದ "ಕ್ರಿಕೆಟ್"ಗೆ ವಿದಾಯ ಹೇಳಿ ಪರೀಕ್ಷೆಯ ತಯಾರಿಯಲ್ಲಿ ತಲ್ಲೀನರಾದೆವು.

ಪರೀಕ್ಷೆ ಮುಗಿದು ಬೇಸಿಗೆ ರಜ ಬಂತು. ಗುಂಪು ಚೆದುರಿತು. ಪಿ.ಟಿ. ಟೀಚರ್ ಮನೆ - ನಮ್ಮಮನೆ ಸಮೀಪವೇ ಇತ್ತು. ಅವರಮನೆ ಮುಂದೆ ಟೀಚರ್‍ಅವರ ಗಂಡು ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಆ ಬ್ಯಾಟು, ವಿಕೆಟ್‍ಗಳು ನಮ್ಮಕ್ರಿಕೆಟ್ ಆಟದಲ್ಲಿ ಉಪಯೋಗಿಸಿದ್ದೇ ಇರಬೇಕೆಂದು ನನ್ನ ಅನುಮಾನ.

ನನ್ನ ತಂದೆಗೆ ಬೇರೆ ಊರಿಗೆ ವರ್ಗವಾದುದರಿಂದ - ನನ್ನ ಓದು ಬೇರೆ ಊರಿನ ಶಾಲೆಯಲ್ಲಿ ಮುಂದುವರೆಯಿತು. ಎರಡು ವರ್ಷ-ಮೂರು ವರ್ಷಕ್ಕೊಮ್ಮೆ ನನ್ನ ತಂದೆಗೆ ವರ್ಗವಾಗುತ್ತಿತ್ತು. ಕರ್ನಾಟಕದಲ್ಲಿ ಅನೇಕ ಊರುಗಳನ್ನು ಸುತ್ತಿದೆವು. ವರ್ಷಗಳು ಉರುಳಿದವು. ಓದು, ವೃತ್ತಿ, ಮದುವೆ, ಸಂಸಾರ, ಮಕ್ಕಳು ಇವುಗಳಲ್ಲಿ ಮುಳುಗಿದೆ. ಮಕ್ಕಳ ಓದು- ಅವರ ಭವಿಷ್ಯದ ಕಡೆ ಹೆಚ್ಚು ಆಸಕ್ತಿ ವಹಿಸಿದೆ.

ಬಂಧುಗಳ ಮದುವೆಯ ಸಮಾರಂಭದಲ್ಲಿ - ಯಾರೋ ಬೆನ್ನು ತಟ್ಟಿ "ಹಾಯ್- ಎಷ್ಟು ವರ್ಷಗಳಾಯ್ತೇ-ನಿನ್ನನ್ನ ನೋಡಿ?" ಎಂದು ಅತ್ಯಂತ ಹರ್ಷದಿಂದ ಉದ್ಗರಿಸಿದರು. ತಕ್ಷಣ ಯಾರೆಂದು ಹೊಳೆಯಲಿಲ್ಲ. "ಹಾಯ್ ಶಾಂತಿ!" ಎಂದು ಮಿಗಿಲಾದ ಸಂತಸದಿಂದ ಅವಳನ್ನು ಅಪ್ಪಿಕೊಂಡೆ. ಅವಳು ಪೂರಾ ಬದಲಾಯಿಸಿದ್ದಳು. ಉದ್ದನೆ ಜಡೆ ಮಾಯವಾಗಿ "ಶೌಲ್ಡರ್ ಕಟ್' ಬಂದಿತ್ತು. ಅವಳ ಮಕ್ಕಳಿಬ್ಬರೂ ಸಾಫ್ಟ್‍ವೇರ್ ಎಂಜಿನಿಯರ್ಸ್ ಎಂದೂ - ಅವರಿಬ್ಬರೂ ಅಮೆರಿಕಾದಲ್ಲಿದ್ದಾರೆಂದೂ, ತಾನು ಮೂರು ಮೊಮ್ಮಕ್ಕಳ ಅಜ್ಜಿ ಎಂದೂ ಹೆಮ್ಮೆಯಿಂದ ಹೇಳಿಕೊಂಡಳು. ಗೌರಿ, ಮೂಲೆ ಮನೆ ಶಾಸ್ತ್ರಿಗಳ ಮಗ ಮಂಜುವನ್ನು ಮದ್ವೆಯಾದ್ಲು- ಅವಳಿಗೆ ಒಬ್ಬ ಮಗ, ಒಬ್ಳು ಮಗಳು- ಆ ಮಂಜು ಈಗ ದೊಡ್ಡ ಪೊಲೀಸ್ ಅಧಿಕಾರಿ. "ಸೋಮಾರಿ ಸರೋಜ" ಅಂತ ನಾವೆಲ್ಲಾ ಚುಡಾಯಿಸ್ತಿದ್ವಲ್ಲ- ಅವಳು ಈಗ ಪ್ರಸಿದ್ಧ ಗೈನಕಾಲಜಿಸ್ಟ್- ಅವಳಪತಿ ದೊಡ್ಡ ಸರ್ಜನ್- ಅವರದೊಂದು ದೊಡ್ಡ ನರ್ಸಿಂಗ್ ಹೋಮ್ ಇದೆ - ಅವರ ಮಗಳು, ಅಳಿಯ ಡಾಕ್ಟ್ರುಗಳು - ಮಗ ಮತ್ತು ಸೊಸೆ ಸಹ ಡಾಕ್ಟ್ರುಗಳು. ವಸಂತಳ ಗಂಡ ಎಂಜಿನಿಯರ್. ಮದುವೆಯ ನಂತರ ಅಮೆರಿಕಾಗೆ ಹೋದವರು ಅಲ್ಲೇ ಸೆಟ್ಲಾಗಿದ್ದಾರೆ ಎಂದು ನಮ್ಮ ಹಳೇ ಸ್ನೇಹಿತೆಯರ ವಿವರಗಳನ್ನು ತಿಳಿಸಿದಳು. ಒಂದೇ ಊರಿನಲ್ಲಿದ್ದ ಶಾಂತಿಗೆ ಎಲ್ಲರ ಸಂಪರ್ಕವಿತ್ತು.

"ಬಾ ನಮ್ಮವರ ಪರಿಚಯ ಮಾಡಿಸ್ತೀನಿ" ಅಂತ ಎಳ್ಕೊಂಡು ಹೋಗಿ- "ಇವರೇ ನಮ್ಮ ಯಜಮಾನ್ರು" ಎಂದು ಪರಿಚಯ ಮಾಡಿಸಿದಳು.

ಎಲ್ಲೋ ನೋಡಿದ್ದೇನೆ, ಚಿರ ಪರಿಚಿತ ಮುಖ ಅಂತಂದುಕೊಂಡು " ಇವರನ್ನು ನಾನು ನೋಡಿದ್ದೀನಿ -ಅಂತನ್ನಿಸುತ್ತೆ" ಎಂದೆ.

"ಟಿ.ವಿ. ಯಲ್ಲಿ ನೋಡಿರ್‍ತೀಯ. ಇವರು ಕ್ರಿಕೆಟ್ ಪ್ಲೇಯರ್ ಆಗಿದ್ರು - ಈಗ ಕ್ರಿಕೆಟ್ ಟೆಸ್ಟ್‍ಗೆಲ್ಲಾ ಅಂಪೈರ್ ಆಗಿರ್ತಾರೆ. ಆಗಾಗ್ಗೆ ಕಾಮೆಂಟ್ರೀನೂ ಕೊಡ್ತಾರೆ" ಅಂತ ಅವಳು ಅಂದೊಡನೆ ಅವರು ಯಾರೆಂದು ಮಿಂಚಿನಂತೆ ಮೆದಳಿನಲ್ಲಿ ಸುಳಿಯಿತು. ನಮ್ಮ ಕ್ರಿಕೆಟ್ ಟೀಮಿನ ನಾಯಕಿ ಹಾಗೂ ಅಂಪೈರ್ ಆಗಿದ್ದ ಶಾಂತಿ ಕ್ರಿಕೆಟ್ ಆಟಗಾರನನ್ನೇ ಕೈ ಹಿಡಿದಿದ್ದಳು.

ನನ್ನ ಹಿರಿ ಮಗ ರೋಶನ್ - ಶಾಲಾ ಕಾಲೇಜಿನಲ್ಲಿ ಒಳ್ಳೆ ಕ್ರಿಕೆಟ್ ಪಟುವಾಗಿದ್ದ. ಶಾಲಾಕಾಲೇಜಿನ ಪರ ಸ್ಪರ್ಧಿಸಿದ್ದ. ಕಾಲೇಜು ಮುಗಿದ ನಂತರ ಕೆಲಸದಮೇಲೆ ಅಮೆರಿಕಾಕ್ಕೆ ತೆರಳಿದ - ಕ್ರಿಕೆಟ್ ದೂರವಾಯಿತು. ಕಿರಿ ಮಗ ಶ್ಯಾಮ್ ಪ್ರಸಿದ್ಧ ಕ್ರಿಕೆಟ್ ಪಟುವಾಗುತ್ತಾನೆಂದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಾಕ್ಕೆ ತೆರಳಿದ. ಕ್ರಿಕೆಟ್ ಆಡುವ ಅಭ್ಯಾಸ ತಪ್ಪಿ ಹೋಯಿತು. ಇವರಂತೆ ಅನೇಕರಿರಬಹುದು

ಟಿ.ವಿ. ಯ ಮುಂದೆ ಕುಳಿತು ಇಂದಿನ ಕ್ರಿಕೆಟನ್ನು ನೋಡುತ್ತಾ, ನನ್ನವರ ವಿಮರ್ಶೆಯನ್ನು ಕೇಳುವಾಗ, ಹಿಂದಿನ ಕ್ರಿಕೆಟ್ಟನ್ನು ಆಗಾಗ್ಗೆ ಮೆಲಕು ಹಾಕುತ್ತೇನೆ. ಅಂದಿನ ಆ ಬಾಲ್ಯದ ಸವಿ ನೆನಪುಗಳನ್ನು ಮೆಲಕು ಹಾಕುವುದೇ ಜೀವನದ ಒಂದು ಚೈತನ್ಯ!

Monday, January 30, 2006

ಒಂದು ಸೈಕಲ್ಲಿನ ಕಥೆ

ಓಹೋ.. ಬನ್ನಿ, ಬಲು ಅಪರೂಪ! ಚೆನ್ನಗಿದ್ದೀರಾ? ಮನೇಲಿ ಎಲ್ಲಾರೂ ಹೇಗಿದ್ದಾರೆ? ಜೋಪಾನ- ಇಲ್ಲಿ ಒಂದು ಸ್ಟೆಪ್ ಡೌನ್ ಇದೆ... ದಯವಿಟ್ಟು ಕೂತ್ಕೊಳ್ಳಿ.

ಹೌದೂರೀ... ನಮ್ಮ ಮಕ್ಕಳಿಬ್ರೂ ಅಮೆರಿಕಾದಲ್ಲಿದ್ದಾರೆ. ಏನ್ಮಾಡೋದು..? ನಾವಿಬ್ರೇ ಇರ್ಬೇಕಾಗಿದೆ! ಹೂಂ.. ಬೇಜಾರಾಗುತ್ತೆ- ಏನ್ಮಾಡೋದು? ಅಡ್‍ಜಸ್ಟ್ ಮಾಡ್ಕೋಬೇಕು. ಕಾಲ ಕಳೆಯೋದಕ್ಕೆ ಏನು ಸಮಸ್ಯೆ ಇಲ್ಲ. ಬೇಕಾದಷ್ಟು ಕೆಲಸಗಳಿವೆ.

ಏನ್ಕೆಲ್ಸಾಂತೀರಾ..ಒಂದುದಿನ ನಮ್ಮನೇಲಿದ್ರೆ ಗೊತ್ತಾಗುತ್ತೆ. ಕಾಫೀ ತೆಗೆದ್ಕೊಳ್‍ತ್ತೀರೋ- ಇಲ್ಲಾ ಮಸಾಲೆ ಟೀ ನೋ? ಮಸಾಲೆ ಪೌಡರ್ ನಾವೇ ಮನೇಲ್‍ಮಾಡಿರೋದು..ಚೆನ್ನಾಗಿದೆ... ಟೀ ಅಂತೀರ ಓ ಥ್ಯಾಂಕ್ಸ್.

ಮನೆ ಮಾಡಲ್ ಆಗಿದೆ - ಯಾವಾಗ ಕಟ್ಟಿಸಿದ್ದು ಅಂತ ಕೇಳ್ತಿದ್ದೀರಿ. ಕಟ್ಟಿಸಿ ಆಗ್ಲೇ ಹದಿನಾರು ವರ್ಷಗಳಾಯ್ತು. ಮಕ್ಕಳು ಮನೇಲಿದ್ದಾಗ ಇನ್ನೂ ಚೆನ್ನಾಗಿ ಇಡ್ತಿದ್ರು. ನನಗೆ ಬಿಡುವೇ ಆಗೋದಿಲ್ಲ. ಜೊತೆಗೆ ಮೊದಲಿನ ಹಾಗೆ ಬಗ್ಗಿ ಎದ್ದು ಮಾಡೋಕ್ಕೂ ಆಗೋಲ್ಲ. ಏನೋ - ಕೈಯಲ್ಲಿ ಎಷ್ಟು ಸಾಧ್ಯನೋ ಅಷ್ಟು ಮಾಡ್ತಿದ್ದೀನಿ.

ನಿಮ್ಮಿಬ್ಬರಿಗೆ ಈ ಮನೆ ದೊಡ್ಡದಾಯ್ತು ಅಂತ ಹೇಳ್ತಾ ಇದ್ದೀರಿ. ಹಾಗೇನೂ ಇಲ್ಲ. ನಮ್ಮನೇಲಿರೋ ಸಾಮನುಗಳಿಗೆ ಈ ಮನೇನೂ ಚಿಕ್ಕದೇ. ಎಷ್ಟೋ ಸಾಮಾನುಗಳನ್ನು ದಾನಮಾಡ್ಬಿಟ್ಟಿದ್ದೀನಿ.

ಮೇಲೆರಡು ರೂಂಗಳಿವೆ. ಅಲ್ಲೊಂದು computer ಕೂಡ ಇದೆ. ನಮ್ಮ ಮನೆಯವರು ಹೆಚ್ಚುಕಾಲ ಆ computer ಜೊತೇಲೇ ಕಳೀತಾರೆ. ಆ computer ಒಂದುರೀತಿ ಅವರ ಆಪ್ತಮಿತ್ರ ಅಂತಾನೇ ಹೇಳ್ಬಹುದು.

ಇದೇನಿದು- ಸೈಕಲ್ ಇಲ್ಲಿದೆ ಅಂತ ಆಶ್ಚರ್ಯ ಪಡ್ತಿದ್ದೀರಾ? ಮತ್ತೇನು ಮಡುವುದು ಹೇಳಿ. ಮೊದಲು ಇದು ಗರೇಜಲ್ಲಿತ್ತು. ಅಲ್ಲಿ ಏನೇನೋ ತುಂಬ್ಕೊಳ್ತು- ಹಿಂದೆ ಪ್ಯಾಸೇಜ್‍ಗೆ ಸ್ಥಳಾಂತರಿಸಿದ್ವಿ-ಪಾಪ ಬಿಸಿಲಿಗೆ ಬೆಂದು, ಮಳೇಲಿ ನೆಂದು ಸೊರಗ್ತಾ ಇತ್ತು. ಅದಕ್ಕೆ ಒಳಗೆ ತಂದು - ಈ ಮಹಡಿ ಪ್ಯಾಸೇಜಲ್ಲಿಟ್ಟು - ಧೂಳು ಮೇಲೆ ಬೀಳ್‍ಬಾರದೂಂತ, ಒಂದು ಬೆಡ್‍ಷೀಟನ್ನು ಬೆಚ್ಚಗೆ ಹೊದ್ದಿಸಿ ನಿಲ್ಲಿಸಿದ್ದೀವಿ.

ಸುಮ್ನೆ ನಿಲ್ಲಿಸಿಬಿಟ್ಟಿದ್ದೀರಿ ಅಂತ ಕೇಳ್ತಿದ್ದೀರಿ - ಮತ್ತೇನು ಮಾಡುವುದು. ಇದರ ಮಾಲೀಕ- ಅರ್ಥಾತ್ ನಮ್ಮ ಹಿರಿಯ ಸುಪುತ್ರ ಅಮೆರಿಕಾದಲ್ಲಿದ್ದಾನೆ. ಮಾಲೀಕನ ಆಗಮನಕ್ಕೆ ಕಾತರದಿಂದ ಕಾಯುತ್ತಿದೆ ಈ ಬಡಪಾಯಿ ಸೈಕಲ್ಲು.

ಅಲ್ರೀ - ಅಮೆರಿಕಾದಲ್ಲಿರೋ ನಿಮ್ಮ ಮಗ ಇದರ ಮಾಲೀಕ ಅಂದ್ರೆ ನಂಬೋಕ್ಕಾಗೋದಿಲ್ಲ ಬಿಡಿ - ಅಂತನ್ನಬೇಡಿ. ನಮ್ಮ ಸುಪುತ್ರ ತನ್ನ ಸ್ವಂತ ದುಡಿಮೆಯಿಂದ ಕೊಂಡು ತಂದ ಸೈಕಲ್ಲು ಇದು.

ಈಗಿನ ಕಾಲದ ಹುಡುಗರು - ಅದರಲ್ಲೂ software engineersಉ ಸೈಕಲ್ ಕೊಂಡುಕೊಳ್ಳೋದು ಆಶ್ಚರ್ಯದ ಸಂಗತಿ - ಅಂತ ನಿಮಗನ್ನಿಸಿರಬಹುದು. ಆದರೆ ಆಶ್ಚರ್ಯ ಪಡಬೇಕಾಗಿಲ್ಲ.

ನಮ್ಮ ಮಗ ಕಾರ್ಯನಿಮಿತ್ತ ಮೂರನೆ ಸಲ ಅಮೆರಿಕಾಗೆ ತೆರಳಿ ಮೂರು ತಿಂಗಳು ಇದ್ದು ನಮ್ಮ ದೇಶಕ್ಕೆ ಹಿಂತಿರುಗಿದಾಗ - ಅವನು ಅಲ್ಲಿಯ ಕೆಲವು ಜೀವನ ಕ್ರಮಗಳನ್ನು ಅನುಸರಿಸಲು ಯೋಚಿಸಿದ. ಅದರಲ್ಲಿ ಮೊದಲ ಜೀವನಕ್ರಮ - ಅಂದರೆ ಸೈಕಲ್ ಸವಾರಿ.

"ಅಮ್ಮ ನಾನು ಇನ್ಮೇಲೆ ಸೈಕಲ್‍ನಲ್ಲಿ ಆಫೀಸ್ಗೆ ಹೋಗ್ತೀನಿ" ಅಂತ ಹೇಳಿದಾಗ - ನಾನು ಅವಕ್ಕಾಗಿ ಅವನನ್ನೇ ನೋಡಿದೆ.

"ಹೂಂನಮ್ಮ, ನಮ್ಮ ಆಫೀಸ್ ದೂರವಿಲ್ಲ, ಮೂರುಕಿಲೋಮೀಟರ್ ಅಷ್ತೇ. ಅಮೇರಿಕಾದಲ್ಲಿ ಹತ್ತಿರ ಇರೋ ಆಫೀಸ್ಗೆ, ಬೇರೇ ಕೆಲಸಗಳಿಗೆ ಸೈಕಲ್‍ನಲ್ಲೇ ಹೋಗ್ತಾರೆ. ಒಂದುರೀತಿ ಎಕ್ಸರ್ಸೈಜ್ ಆದಂಗೂ ಆಗುತ್ತೆ." ತನ್ನ ತತ್ವವನ್ನು ಪ್ರತಿಪಾದಿಸಿದ.

"ಇದು ಅಮೇರಿಕಾ ಅಲ್ಲ. ಅಲ್ಲಿ ರಸ್ತೆಗಳು ವಿಶಾಲವಾಗಿರುತ್ತವೆ - ಹಳ್ಳ ಕೊಳ್ಳಗಳಿಲ್ಲದೆ ಸಮನಾಗಿರುತ್ತೆ. ಸಂಚಾರನಿಯಮಗಳನ್ನು ಸರಿಯಾಗಿ ಪಾಲಿಸುತ್ತಾರೆ. ಸೈಕಲ್ ಸವಾರಿ ಮಾಡುತ್ತೇನೆ ಅನ್ನೋದನ್ನ ದೂರ ಮಾಡು" ಎಂದು ಗಿಣೀಗೆ ಹೇಳಿದಹಾಗೆ ಹೇಳಿದೆ.

"ಹಾಗೆಲ್ಲ ಹೆದರ್ಕೊಂಡು ಹಿಂದೇ ಮುಂದೇ ಮಾಡಿದರೆ ಹೇಗಮ್ಮಾ. ಹತ್ತಿರವಿರುವ ಜಾಗಗಳಿಗೆ ಸೈಕಲ್‍ನಲ್ಲಿ ಹೋಗೋದನ್ನು ನಮ್ಮ ಜನ ರೂಢಿಸಿಕೊಳ್ಳಬೇಕು. ಪೆಟ್ರೋಲ್ ಉಳಿಯುತ್ತೆ, ಪಲ್ಯೂಷನ್ ಕಡಿಮೆಯಾಗುತ್ತೆ. ಒಬ್ರು ಧೈರ್ಯವಾಗಿ ಶುರುಮಾಡಿದ್ರೆ ಮತ್ತೊಬ್ಬರು ಪಾಲಿಸ್ತರೆ" ಅಂತ ನನಗೇ ವೇದಾಂತ ಹೇಳಿದ.

ನನಗೆ ಅವನ ವೇದಾಂತವನ್ನು ಕೇಳಿ ಧೈರ್ಯವಂತೂ ಉದ್ಭವಿಸಲಿಲ್ಲ.
"ಏನಂತೇ" ಎಂದು ನನ್ನವರು ಕೇಳಿದರು.
"ನಿಮ್ಮ ಸುಪುತ್ರ ಸೈಕಲ್ಲಿನಲ್ಲಿ ಆಫೀಸ್ಗೆ ಹೋಗ್ತಾನಂತೆ" ಅಂತಂದೆ.
"ಇದ್ದ ಎರಡು ಸೈಕಲ್ಲು ದಾನಮಾಡಿದ್ದಾಗಿದೆ. ಬೇರೇಸೈಕಲ್ ಎಲ್ಲಿದೆ?"ಎಂದು ನನ್ನನ್ನೇ ಪ್ರಶ್ನಿಸಿದರು.
"ಕೊಂಡ್ಕೊಳ್ತಾನಂತೆ"ಎಂದು ಮೆಲ್ಲನೆ ನುಡಿದೆ.
"ಅದೊಂದ್ ಬೇರೇ ನಮ್ಮ ಮನೇಗೆ ಬೇಕಿತ್ತೆ?" ಬೇಡಾ ಅನ್ನು. ಇರೋ ವೆಹಿಕಲ್ಸ್‍ಗೇ ಗರಾಜ್ ಸಕಾಗ್ತಿಲ್ಲ." ಅಂತ ಸ್ವಲ್ಪ ದನಿ ಎತ್ತರಿಸಿ ಹೇಳಿದರು.

ನನ್ನ ಉಪದೇಶ, ಹಾಗೂ ನನ್ನವರು ದನಿ ಎತ್ತರಿಸಿ ಹೇಳಿದ ಮಾತಿನಿಂದ ನನ್ನ ಮಗ ಸೈಕಲ್ ಸಂಗತಿಯನ್ನು ಮರೆಯುತ್ತಾನೆಂದು ಭಾವಿಸಿದೆ.

ತಪ್ಪು - , ನನ್ನ ಭಾವನೆ ಸುಳ್ಳಾಯಿತು.

ಮಾರನೆಯ ಮಧ್ಯಾಹ್ನ ಶನಿವಾರ, ಮಗನಿಗೆ ರಜಾದಿನ - ನಾನು ಗಿಡಗಳಿಗೆ ನೀರುಣಿಸುತ್ತಿದ್ದೆ. ಗೇಟಿನ ಬಳಿ ಆಟೋ "ಗಕ್" ಎಂದು ನಿಂತಿತು. ಆಟೋದ ಹಿಂದಿನ ಸೀಟಿನಲ್ಲಿ - ನನ್ನ ಮಗನ ಆಪ್ತಮಿತ್ರ "ಏನೋಮ್ಮಾ"! ಬಾಯಿ ತೆಗೆದರೆ ನಾಲ್ಕು ಗಾವುದಕ್ಕೆ ಕೇಳುವಂತಹ ಧ್ವನಿಉಳ್ಳ ಅವನು "ರೋಶನ್ - ಇಳಿಸ್ತೀಯೇನೋಮ್ಮ?" ಎಂದು ಹಿಂದಿನ ಸೀಟಿನಲ್ಲಿ ಅಡ್ಡಲಾಗಿ ಮಲಗಿಸಿದ್ದ ಸೈಕಲ್ ಹಿಂದಿನಿಂದ ಕರೆದಾಗ-, ನನ್ನ ಎದೆಯ ಬಡಿತ ದ್ವಿಗುಣಗೊಂಡಿತು. ಆಟೋವನ್ನು ಬೈಕಿನಲ್ಲಿ ಹಿಂಬಾಲಿಸಿದ್ದ ನನ್ನ ಮಗ ಆ ಸೈಕಲ್ಲನ್ನು ಬಲು ಪ್ರೀತಿಯಿಂದ ಜೋಪಾನವಾಗಿ ಮಗುವನ್ನು ಎತ್ತಿಕೊಳ್ಳುವಂತೆ ಎತ್ತಿಕೊಂಡು ಮೆಲ್ಲನೆ ಇಳಿಸಿ ಗೇಟಿನೊಳಗೆ ತಂದ. ನಾನು ಕಕ್ಕಾ-ಬಿಕ್ಕಿಯಾಗಿ ನೋಡುತ್ತಾ ನಿಂತಿದ್ದೆ.

"ಸೈಕಲ್ ಚೆನ್ನಾಗಿದೆ ಅಲ್ವೇನಮ್ಮಾ" ದೊಡ್ಡಚಕ್ರಗಳ, ಕೆಂಪುಬಣ್ಣದ, ಎತ್ತರದ ಸೈಕಲನ್ನು ಮೆಲ್ಲನೆ ಸವರುತ್ತಾ ಕೇಳಿದ.

"ಸೈಕಲ್ಲೇನೋ ಚೆನ್ನಾಗಿದೆ, ಆದರೆ ಈ ಬೆಂಗಳೂರಿನಲ್ಲಿ ಸೈಕಲ್ ಸವಾರಿ ಇವನಿಗೆ ಸಾಧ್ಯವೇ" ಎಂಬ ಪ್ರಶ್ನೆ ನನ್ನಮನಸ್ಸಿನಲ್ಲಿ ಮೂಡಿತು.

"ನಾನೂ ಒಂದು ಪರ್ಚೇಸ್ ಮಾಡ್ತೀನಿ" ಅಂತಂದ 'ಯೇನೋಮ್ಮಾ'

ಯಾಕೋ ಪ್ರಪಂಚ ಬದಲಾಗ್ತಿದೆ ಅಂತನ್ನಿಸಿತು.

"ಮೂರೂವರೆ ಸಾವಿರ ಆಯ್ತು ಅಣ್ಣಾ ಅಷ್ಟೆ. ಆಟೋದವನು ಡಬ್ಬಲ್ ಕೇಳೀದ - ಕೊಟ್ಟೆ" ಎಂದು ಸಮರ್ಥಿಸಿಕೊಂಡ.

"ಎಷ್ಟುದಿನ ಉಪಯೋಗಿಸುತ್ತೀಯೋ ನಾನೂ ನೋಡ್ತೀನಿ" ಎಂದು ಹೇಳಿ ಮುಂದೆ ಮಾತನಾಡದೆ ಸುಮ್ಮನಾದರು ನನ್ನವರು.

ಸಂಜೆ ಸೈಕಲ್ ಸವಾರಿಯ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದವು. ನಮ್ಮ ಮಗ ಅವನ ಪ್ರೀತಿಯ ಸೈಕಲ್ಲಿಗೆ ಮಲ್ಲಿಗೆ ಹಾರಹಾಕಿ ಅತಿಶ್ರದ್ಧೆಯಿಂದ ಪೂಜಾವಿಧಿಗಳನ್ನು ಮುಗಿಸಿ ಸಿಹಿ ಹಂಚಿದ.

ಮೊದಲಿಗೆ ನಮ್ಮಮನೆ ಇರುವ ಪ್ರದೇಶವನ್ನು ಒಂದುಸುತ್ತು ಹಾಕಿ ಬರುತ್ತೇನೆಂದು ಸೈಕಲ್ ಏರಿದ. ಸವಾರಿ ಹೊರಟಿತು. ನಾನೂ, ನನ್ನವರು ಮೂಕ ಪ್ರೇಕ್ಷಕರಾಗಿದ್ದೆವು. ಅರ್ಧ ಸುತ್ತಿ ಬೇಗನೆವಾಪಸ್ ಆದ ಮಗನನ್ನು ನೋಡಿ "ಯಾಕೆ ರಾಜ್ ಇಷ್ಟು ಬೇಗ ಬಂದ್ಬಿಟ್ಟೆ?" ಎಂದು ನನ್ನವರು ಕೇಳಿದಾಗ " ಏನಣ್ಣಾ ಟು ವೀಲರ್ಸ್ ನವರು ಮೈಮೇಲೇ ಬರ್ತಾರೆ, ಆಟೋದವರು ಅಡ್ಡಡ್ಡ ಬರ್ತಾರೆ, ಫುಟ್ಪಾತ್ನಲ್ಲಿ ಜನ ಓಡಾಡೋದೇಇಲ್ಲ, ಸಡನ್ನಾಗಿ ಕ್ರಾಸ್ ಮಡ್ತಾರೆ ಅದಕ್ಕೆ ಬಂದ್ಬಿಟ್ಟೆ" ಎಂದು ಸೈಕಲ್ಲನ್ನು ನಿಲ್ಲಿಸಿದ.

"ಸ್ವಲ್ಪ ಕಡಿಮೆ ಎತ್ತರ ಇದ್ದಿದ್ರೇ ನಾನೂ ರೈಡ್ ಮಾಡ್ತಿದ್ದೆ. ನನಗೆ ಇದು ತುಂಬಾ ಹೈಟ್ ಆಯ್ತು, ಅದಲ್ದೆ ಟೈರು ತುಂಬಾ ಸಣ್ಣಕ್ಕಿದೆ, ದಪ್ಪಕ್ಕಿರಬೇಕಿತ್ತು" ಎಂದು ತಮ್ಮ ಅಭಿಪ್ರಾಯವನ್ನು ನನ್ನವರು ಹೇಳಿದರು.

"ಇಲ್ಲಾ ಅಣ್ಣಾ ಇಂತಹ ಸೈಕಲ್ಲನ್ನೇ ಅಲ್ಲಿ ಉಪಯೋಗಿಸುವುದು. ಅಲ್ಲಿ ನಾನೂ ಇಂತಹ ಸೈಕಲ್ಲನ್ನೇ ಯೂಸ್ ಮಡ್ತಾ ಇದ್ದಿದ್ದು. ನೀನೊಂದ್ಸಲ ನೋಡು" ಎಂದು ನನ್ನವರನ್ನು ಒತ್ತಾಯಿಸಿದ. ನನ್ನವರಲ್ಲೂ ಹುಮ್ಮಸ್ಸು ಉಕ್ಕಿತು. ಅದೆಷ್ಟೋ ವರ್ಷಗಳನಂತರ ಸೈಕಲ್ ಹ್ಯಾಂಡಲ್ ಅನ್ನು ಹಿಡಿದರು.

"ರೂಢಿ ತಪ್ಪಿದೆ, ಯಾಕ್ರೀ ರಿಸ್ಕ್ ತೆಗೆದ್ಕೊಳ್ತೀರಿ" ಅಂತ ಹಿಂಜೆರಿಯುತ್ತಾ ಹೇಳಿದೆ.

"ಯಾಕಮ್ಮ ಹಾಗಂತೀಯ; ನನ್ಕೈಲಿ ಆಗೋದಿಲ್ಲಾಂತ ತಿಳ್ಕೊಂಡಿದ್ದೀಯಾ - ನೋಡ್ತಿರು ಹೇಗೆ ಹೋಗ್ಬರ್ತೀನಿ" ಎಂದು ಸ್ಪರ್ಧೆಗೆ ಸಿದ್ಧರಾದವರಂತೆ ಉತ್ಸಾಹದಿಂದ ಸೈಕಲ್ಲೇರಿ "ಸರ್ರಂತ" ಹೊರಟೇಬಿಟ್ಟರು. ಹಿಂದಿನ ಬೀದಿ ಬಳಸಿ ಬಂದ ಅವರು " ಇದು ನನಗೆ ಸರಿ ಹೋಗೋಲ್ಲ. ಸರಿ ಇದ್ದಿದ್ದರೆ ಪ್ರತಿದಿನ ಒಂದು ಸುತ್ತು ಹಾಕ್ತಿದ್ದೆ." ಎಂದು ಸೈಕಲ್ಲನ್ನು ಮಗನಿಗೊಪ್ಪಿಸಿ ಕೈ ಮುಗಿದರು.

ಎಲ್ಲಿಂದಲೋ ಹಾರಿಬಂದ ನಮ್ಮ ಚಿಕ್ಕ ಮಗ - ಪಕ್ಕವಾದ್ಯ - "ನಾನೊಂದ್ಸಲ ನೋಡ್ತೀನಿ" ಎಂದು ಅತ್ಯಂತ ಉತ್ಸುಕತೆಯಿಂದ ಹಾರಿ ಕುಳಿತು ಜಿಂಕೆಯಂತೆ ಹೊರಟೇಬಿಟ್ಟ. ನಮ್ಮ ಮನೆ ಪ್ರದೇಶವನ್ನು ಪ್ರದಕ್ಷಿಣೆ ಮಾಡಿ ಬಂದಿಳಿದು ಅವನ ಅಣ್ಣನ ಬೆನ್ನು ತಟ್ಟಿ
"ಸಕತ್ತಾಗಿದೆ" ಎಂದು ಶಹಬಾಸ್‍ಗಿರಿಇತ್ತ. ಅವನ ಪ್ರೋತ್ಸಾಹದಿಂದ ನಮ್ಮ ಹಿರಿ ಮಗ ಹಿಗ್ಗಿದ.

ಇದು ಪ್ರಥಮದಿನದ ಸೈಕಲ್ ಸವಾರಿಯ ಪರಿಚಯ.

ಅಂದು ಸೋಮವಾರ - "ಅಮ್ಮಾ ಕಾಫೀ ಕೊಡ್ತೀಯಾ" ಎಂದು ಆರು ಗಂಟೆಗೇ ಎದ್ದು ಬಂದ ಮಗ ಕೇಳಿದಾಗ ಅಚ್ಚರಿಯಾಯಿತು. ಪ್ರತಿದಿನ ಏಳು ಗಂಟೆಯಾದರೂ ಏಳದೇ ಇದ್ದ ನಮ್ಮ ಸುಪುತ್ರ ನನ್ನ ಮುಂದೆ ನಿಂತಾಗ ಇದೇನು ಕನಸೋ ಎಂದೆನಿಸಿತು.

"ಎಂಟು ಗಂಟೆಗೇ ಹೊರಡುತ್ತೀನಮ್ಮಾ. ಯಾಕೇಂದ್ರೆ ಆಮೇಲೆ ಪೀಕ್ ಅವರ್ಸ್‍ನಲ್ಲಿ ಸೈಕಲ್ಲಿನಲ್ಲಿ ಹೋಗೋದು ಕಷ್ಟ" ಅಂತ ವಿವರಣೆ ನೀಡಿದ.

ಯುದ್ಧಕ್ಕೆ ಹೊರಟ ವೀರನಂತೆ ಎಂಟು ಗಂಟೆಗೆ ಸರಿಯಾಗಿ ಸೈಕಲ್ ಏರಿ ಹೊರಟ.

ಪ್ರಯಾಸದಿಂದ ತುಳಿಯುತ್ತಾ ನಮ್ಮ ಮನೆಯಿಂದ ಸ್ವಲ್ಪ ದೂರವಿರುವ ದಿಬ್ಬದರಸ್ತೆಯನ್ನು ಮಗ ದಾಟುತ್ತಿರುವುದನ್ನು ಗೇಟಿನಬಳಿ ನಿಂತು ರೆಪ್ಪೆಮಿಟುಕಿಸದೆ ನೋದುತ್ತಾ ನಿಂತೆ.

ಮಧ್ಯಾಹ್ನ ಊಟಕ್ಕೆ ಬಂದಾಗ ಅಂದಿನ ಅನುಭವಗಳನ್ನು ಸವಿಸ್ತಾರವಾಗಿ ವಿವರಿಸಿದ. ಬೆಂಗಳೂರು ಬಸ್ಸಿನ ಚಾಲಕರ ಗುರಿ - ಒಂದೇ - ಎಲ್ಲಾ ವಾಹನಗಳನ್ನೂ ಹಿಂದೂದಿ ಮುಂದೆ ಹೋಗುವುದು. ಹಾಗಾಗಿ ಪಕ್ಕದಲ್ಲಿ ಯಾವುದೇವಾಹನವಿದ್ದರೂ ಅದಕ್ಕೆ ಯಾವಾಗ ಬೇಕಾದರೂ ಡಿಕ್ಕಿಹೊಡೆಯುವ ಸಂಭವ ಹೆಚ್ಚು. ಆಟೋದವರ ಗುಣವೇ ಬೇರೆ. ಆಟೋದ ಮುಂದಿನ ಚಕ್ರ ತೂರಿದರೆ ಸಾಕು ಹೇಗೋ ನುಗ್ಗುತ್ತಾರೆ. ಇನ್ನು ಟೂ ವೀಲರ್ಸ್ ಕಥೆ - ಬೇಡ - ಹಾವಿನಂತೆ ಎಡ್ಡಾ ದಿಡ್ಡಿಯಾಗಿ ಹರಿದಾಡುತ್ತಾರೆ. ಇವುಗಳ ಮಧ್ಯೆ ಸೈಕಲ್ ಸವಾರಿ ಎಂದರೆ- ಅದೊಂದು ದಿಗ್ವಿಜಯದ ಸಂಗತಿಯೇ

ಊಟದನಂತರ ಬಿಸಿಲಿನಲ್ಲಿ ಮತ್ತೆ ಎಲ್ಲಿ ಸೈಕಲ್ಲೇರುತ್ತಾನೋ ಎಂದು ಚಿಂತಿಸುತ್ತಿರುವಾಗ "ಶ್ಯಾಮ್ ಬೈಕ್‍ನಲ್ಲಿ ಬಿಡ್ತೀಯಾ? ತುಂಬಾ ಬಿಸಿಲು" ಎಂದು ತಮ್ಮನನ್ನು ಕೇಳಿದ. ಅದನ್ನು ಕೇಳಿ ನನ್ನ ಮನಸ್ಸು ಹಗುರವಾಯಿತು.

ಆದಿನ ರಾತ್ರಿ ಕಾಲು ನೋವೆಂದು ಕಾಲುಗಳನ್ನು ನೀವಿಕೊಂಡು ನಮ್ಮ ಮಗ " ಇವತ್ತೇ first day ನೋಡು ಅದಕ್ಕೆ ಕಾಲು ನೋವು. ಸ್ವಲ್ಪ ರೂಢಿ ಆದ್ಮೇಲೆ ಸರಿಹೋಗುತ್ತೆ" ಎಂದು ಸಮರ್ಥಿಸಿಕೊಂಡ.

ದ್ವಿತೀಯ ವಿಘ್ನವಾಗಬಾರದೆಂದು ಮಾರನೆಯದಿನ ಎಂಟುಗಂಟೆಗೆ ಸರಿಯಾಗಿ ಸೈಕಲ್ಲೇರಿ ಆಫೀಸಿಗೆ ಹೊರಟ. ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ "ಇವತ್ತು ಏನಾಯ್ತು ಗೊತ್ತಾಮ್ಮಾ" ಅಂತಂದ.

"ಏನಾಯ್ತು?" ಎಂದು ಕೇಳಿದೆ

ದ್ವಿತೀಯ ವಿಘ್ನ ಸೈಕಲ್ಲಿಗಾಗಿತ್ತು. ದಿಬ್ಬವೇರಿ ಇಳಿದು ನೋಡಿದಾಗ ಸೈಕಲ್ಲಿನ ಹಿಂದಿನ ಚಕ್ರದ ಟೈರು ಪಂಕ್ಚರ್ ಆಗಿತ್ತು. ಅಲ್ಲೇ ಇದ್ದ ಸೈಕಲ್ ಶಾಪಿನಲ್ಲಿ ಸರಿಪಡಿಸಿಕೊಂಡು ಮುಂದೆ ಹೋಗೋಣ ಎಂದು ಹೋದೆ. ಅದೇತಾನೆ ಬಾಗಿಲು ತೆಗೆಯುತ್ತಿದ್ದ ಆ ಶಾಪ್‍ನವನು "ಹೋಗಿ ಸಾರ್- ಬೆಳ್ಳಂಬೆಳಗ್ಗೆ ಟೈರ್ ಪಂಕ್ಚರ್ ಹಾಕೋದಿಲ್ಲ. ಬೋಣಿ ಸರಿಯಾಗಿರ್ಬೇಕು" ಅಂತಂದ.

"ಬೋಣಿ ಎರಡು ರೂಪಯಿಯಾದ್ರೇನೀಗ? ಇಡೀ ದಿನ ವ್ಯಾಪರನೇ ಆಗ್ದೇ ಹೋದ್ರೆ ಏನ್ಮಾಡ್ತೀರಿ? ನೀವು ಮಾಡ್ದೇ ಹೋದ್ರೇ ಈ ಎರಡುರುಪಾಯನ್ನೂ ಕಳ್ಕೊಳ್ತೀರಿ" ಎಂದು ಸವಾಲು ಹಾಕಿದನಂತೆ ನಮ್ಮ ಮಗ. ಈ ಮಾತು ಎಲ್ಲಿ ಶಾಪವಾಗಿ ಪರಿಣಮಿಸಿ ವ್ಯಾಪಾರವಾಗುವುದಿಲ್ಲವೊ ಎಂದು, ಗೊಣಗುಟ್ಟುತ್ತಾ ಪಂಕ್ಚರ್ ಹಾಕಿಕೊಟ್ಟನಂತೆ.

"ಇದೆಲ್ಲ ಯಾಕ್ಬೇಕು, ಬಕ್ನಲ್ಲಿ ಹೋಗ್ಬಾರ್ದೇ" ಅಂತಂದೆ.

"ಇಷ್ತಕೆಲ್ಲಾ ಬೇಜಾರು ಮಾದ್ಕೊಂಡ್ರೆ ಹೇಗಮ್ಮಾ" ಎಂದು ನನಗೆ ಸಮಾಧಾನ ಹೇಳಿದ.

"ನಿಮ್ಮ ಮಗನ ಸಾಧನೆ ಮೆಚ್ಚ ಬೇಕು ಅಂತ ಹೇಳ್ತಾಇದ್ದೀರಾ. ಸಾಧನೆ ಒಂದೇ ಅಲ್ಲ ಅವನು ಮಾರ್ಗದರ್ಶಿಯೂ ಆದ".

"ಹೇಗೇ ಅಂತ ಕೇಳ್ತೀರಾ - ಅಮ್ಮಾ ನಿಶಾಂತ್ ಕೂಡ ನಂತರಹದ್ದೇ ಸೈಕಲ್ ಕೊಂಡಿದ್ದಾನೆ. ಇವತ್ತು ಅವನೂ ಸೈಕನಲ್ಲಿ ಆಫೀಸಿಗೆ ಬಂದಿದ್ದ. ಹೀಗೆ ತನಗೊಬ್ಬ ಜೊತೆಗಾರನಿದ್ದಾನೆಂದು, ಅವನ ಮಾರ್ಗದರ್ಶಿತಾನೂ ಎಂದು ನನ್ನ ಮಗ ಹೇಳಿದ"
ಎರಡು ಸೈಕಲ್ಲುಗಳೂ ಎರಡು ದಿನಗಳು ಆಫೀಸಿನ ಆವರಣದಲ್ಲಿ ರಾರಾಜಿಸಿದವು.

ನಾಲ್ಕನೆಯದಿನ ಬೆಳಗ್ಗೆ ಏಳು ಗಂಟೆಯಾದರೂ ಏಳದ ಮಗನನ್ನು ಎಬ್ಬಿಸಲೆತ್ನಿಸಿದೆ.

"ಶ್ಯಾಮ್ ಏಳ್ತೀಯಾ, ಬೈಕಲ್ಲಿ ಬಿಡ್ತೀಯಾ" ಎಂದು ನಿದ್ದೆಯಲ್ಲಿದ್ದ ತಮ್ಮನ ಹೊದಿಕೆಯನ್ನು ಪಕ್ಕಕ್ಕೆ ಸರಿಸಿ ಕೇಳಿದ. ತಮ್ಮನ ಹಿಂದೆ ಬೈಕಿನಲ್ಲಿ ಹಿಂದಿನದಿನಗಳಂತೆ ಹೊರಟ ನಮ್ಮ ಮಗ. ಸೈಕಲ್ ಶಾಂತವಾಗಿ ನಿಂತಿತ್ತು.

ಮರುದಿನ ಎಂಟುಗಂಟೆಯಾದರೂ ವೃತ್ತ ಪತ್ರಿಕೆಯನ್ನು ಓದುತ್ತಿದ್ದ ಮಗನನ್ನು " ಇವತ್ತು ಆಫೀಸಿಗೆ ಹೋಗೋದಿಲ್ವೇ?" ಎಂದು ಕೇಳಿದೆ

"ಲೇಟಾಗಿಬಿಡ್ತಮ್ಮಾ. ಅಣ್ಣಾ ಸ್ವಲ್ಪ ಬೇಗ ರೆಡಿಯಾಗ್ತೀಯಾ. ನನ್ನ ಆಫೀಸ್ ಹತ್ತಿರ ಡ್ರಾಪ್ ಮಾಡ್ತೀಯಾ?" ಎಂದು ನನ್ನವರನ್ನು ಕೋರಿದ.

ಪ್ರೀತಿಯ ಮಗ. ಅವನ ಕೋರಿಕೆಗೆ ಇಲ್ಲವೆನ್ನಲಾದೀತೇ? ಗಡಿಬಿಡಿಯಿಂದ ಸಿದ್ಧರಾಗಿ ಮಗನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಕಾರಿನಲ್ಲಿ ಹೊರಟರು.

ಆನಂತರ ಎರಡು ದಿನಗಳು ರಜ. ಯಾಕೋ ಸೈಕಲ್ಲು ಶಾಂತವಾಗಿ ನಿಂತೇಬಿಟ್ಟಿತು.

ಸೈಕಲ್‍ಬಂದ ಒಂದು ತಿಂಗಳಲ್ಲೇ ಅವನು ಅಮೇರಿಕಾಗೆ ಹೋಗಬೇಕಾಯಿತು. ಸೈಕಲ್ಲನ್ನು ತಮ್ಮನಿಗೊಪ್ಪಿಸಿ "ಚೆನ್ನಾಗಿ ನೋಡಿಕೋ" ಎಂದು ಹೇಳಿದ.

"ನೀನೇನು ಯೋಚನೆ ಮಾಡ್ಬೇಡ" ಎಂದು ನಮ್ಮ ಕಿರಿಯಮಗ ರಾಜಕಾರಣಿಯಂತೆ ಆಶ್ವಾಸನೆಯಿತ್ತ.

ಎರಡು ತಿಂಗಳಲ್ಲೇ ಕೆಲಸದ ನಿಮಿತ್ತ ನಮ್ಮ ಕಿರಿಯಮಗ ದುಬೈಗೆ ವಿಮಾನ ಹತ್ತಿದ.

"ಉಪಯೋಗಿಸದೆ ಹೀಗೆ ಇಟ್ರೆ ಇದು ಕೆಡುತ್ತೆ. ಆದ್ರಿಂದ ಈಗ್ಲೇ ಯಾರಿಗಾದರೂ ಮಾರಿದರೆ ಒಳ್ಳೆಯದಲ್ಲವೆ? ನೆಟ್ಟಗೆ ಒಂದುವಾರಾನೂ ಉಪಯೋಗಿಸಿಲ್ಲ" ಅಂತ ನನ್ನ ಅಭಿಪ್ರಾಯವನ್ನು ನನ್ನವರ ಮುಂದಿಟ್ಟೆ.

"ಅಯ್ಯೋ ಯಾರ್ ತೆಗೆದ್ಕೊಳ್‍ತಾರೆ" ಎಂದು ನನ್ನ ಅಭಿಪ್ರಾಯವನ್ನು ತಳ್ಳಿದರು.

ಆಯುಧ ಪೂಜೆ ದಿನ ಸೈಕಲ್ಲಿನ ಹೊದಿಕೆ ತೆಗೆದು, ಧೂಳು ಒರೆಸಿ, ಶುದ್ಧಗೊಳಿಸಿ ಬೇರೇ ವಾಹನಗಳಸಾಲಿನಲ್ಲಿ ನಿಲ್ಲಿಸಿ ಅರಿಶಿನ - ಕುಂಕುಮ - ಹೂವನ್ನಿಟ್ಟು, ಮಂಗಳಾರತಿ ಮಾಡಿ ಅದನ್ನು ಸನ್ಮಾನಿಸಿ ನಂತರ ಅದರ ಸ್ವಸ್ಥಾನದಲ್ಲಿ ಇಟ್ಟು ಅದರಮೇಲೆ ಹೊದಿಕೆ ಹೊದಿಸುತ್ತೇವೆ.

ಕೆಲವು ದಿನಗಳ ಹಿಂದೆ ನಮ್ಮ ಕೆಲಸದಾಕೆ ಬಲು ಮುತುವರ್ಜಿಯಿಂದ ಸೈಕಲ್ಲಿನ ಹೊದಿಕೆ ತೆಗೆದು-ಧೂಳು ಒರೆಸಿ- ಶುಭ್ರವಾದ ಬೇರೇ ಹೊದಿಕೆಯನ್ನು ಹೊದಿಸಿದಳು. ಎಂದೂ ಇಲ್ಲದ ಅವಳ ಈ ಉಪಚಾರವನ್ನು ವೀಕ್ಷಿಸಿ ಚಕಿತಳಾದೆ. ಮರುದಿನ ಮೆಲ್ಲನೆ ಕೇಳಿದಳು " ಅಮ್ಮಾ ಈ ಸೈಕಲ್ಲು ಅಂಗೇ ನಿಂತದೆ. ನನ್ಮಗ ಸೈಕಲ್‍ತೆಕ್ಕೊಡು ಅಂತ ಕೇಳ್ತಾವ್ನೆ. ಈ ಸೈಕಲ್ ನಂಕೊಟ್ಟು ದುಡ್ನ ತಿಂಗಳ್ಸಂಬ್ಳದಲ್ಲಿ ಇಡ್‍ಕೊಳ್ರಿ"ಎಂದು.

ಇದರಿಂದ ಇಬ್ಬರಿಗೂ ಲಾಭ ಎಂದು ಭಾವಿಸಿ ಅವಳ ವಿನಂತಿಯನ್ನು ನನ್ನವರಿಗೆ ಅರುಹಿದೆ.

ಅವರು ಮಗನಿಗೆ ಫೋನಾಯಿಸಿ ಕೇಳಿದರು.

"ಬೇಡಾ ಅಣ್ಣಾ, ನಾನು ಇಂಡಿಯಾಕ್ಕೆ ಬಂದಮೇಲೆ ಉಪಯೋಗಿಸ್ತೀನಿ" ಎಂದು ಆ ಸೈಕಲ್ಲಿನಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಅವನ ಆಸೆಗೆ ಅಡ್ಡಿ ಏಕೆ ಅಂತ ನಾವೂ ಆಗಾಗ್ಗೆ ಸೈಕಲ್ಮೇಲಿನ ಧೂಳು ಒರಸ್ತಾ ಇರ್ತೀವಿ.

"ಅದೂ ಸರೀ ಅನ್ನಿ, ನಿಮ್ಮ ಮಗ ಸೊಸೆ ಬಂದ್ಮೇಲೆ ಇಬ್ರೂ ಸೈಕಲ್ ಡಬ್ಬಲ್‍ರೈಡ್ ಅನುಭವ ಪಡೀಬಹುದೂ ಅಂತ ಇದ್ದೀರಾ? ಹಗೂ ಆಗಬಹುದು".

ಒಬ್ರ ತೂಕಾನೇ ತಡಿಯೋಕ್ಕಾಗೋಲ್ಲ ಈ ಟೈರ್ ಗೆ, ಇನ್ನು ಡಬ್ಬಲ್‍ರೈಡ್ ಆಗುತ್ತಾ ಅಂತ ಥಟ್‍ಅಂತ ನನ್ನವರು ಹೇಳ್ತಾಇದ್ದಾರೆ. ದೂರ ದರ್ಶನದಲ್ಲಿ ಪ್ರಸಾರವಗೋ "ಥಟ್ ಅಂತ ಹೇಳಿ" ಅನ್ನೋ ಕಾರ್ಯಕ್ರಮಾನ ತಪ್ಪದೇ ನೋಡಿ ಈಗ ನನ್ನವರು ಯಾವುದಕ್ಕೂ ಥಟ್ ಅಂತ ಹೇಳೋ ಅಭ್ಯಾಸ ಮಾಡ್ಕೊಂಡ್ಬಿಟ್ಟಿದ್ದಾರೆ.

"ದಬ್ಬಲ್ ರೈಡ್ ಅನ್ನತ್ಲೂ ನೆನಪಿಗೆ ಬರೋದು, ಸುಮಾರು ೩೪ ವರ್ಷಗಳ ಹಿಂದೆ ದೇವಾನಂದ್- ಮಮ್ತಾಜ್ "ತೇರೇ ಮೇರೇ ಸಪ್ನೇನಲ್ಲಿ" - "ಹಮ್ ತುಮ್" ಎಂದು ಹಾಡುತ್ತಾ ದಬ್ಬಲ್ ರೈಡ್ ಮಾಡೋ ದೃಶ್ಯ.

ನಮ್ಮ ಮಗ ಸೊಸೆ ಆರೀತಿ ಹಾಡ್ತಾ ಈ ಸೈಕಲ್ಮೇಲೆ ಡಬ್ಬಲ್ ರೈಡ್ ಮಾಡಿದ್ರೆ ಎಷ್ಟು ಅದ್ಭುತವಾಗಿರುತ್ತೆ.

"ಹಂ ಭೀ ಹೋ- ತುಂ ಭೀ ಹೋ- ದೋನೋ ಭೀ" ಎಂದು ಅವರಿಬ್ಬರೂ ಮಧುರವಾಗಿ ಹಾಡುತ್ತಾ ಈ ಸೈಕಲಿನ್ನಲಿ ಡಬ್ಬಲ್ ರೈಡ್ ಹೊರಟರೆ- ಓ ಆ ಮನೋಹರ ಕಲ್ಪನಾ ದೃಶ್ಯ ಎಷ್ಟು ಚೆನ್ನ!

Saturday, December 31, 2005

ನನ್ನವರು ಮತ್ತು ಟಿ.ವಿ.

ನನ್ನವರು "ಬದುಕು" ಮೆಗಾಧಾರಾವಾಹಿಯ ನಾಯಕನನ್ನು "ಮಳೆಬಿಲ್ಲು" ಗೆ ಕರೆತರುತ್ತಾರೆ. "ಮಳೆಬಿಲ್ಲು"ನಾಯಕಿ ಪ್ರಜ್ಞಾ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾಳೆ. ನನ್ನವರು ಅವಳೆಲ್ಲಿ ಹೋದಳು- ಎಂದು ಪ್ರಶ್ನಿಸುತ್ತಾರೆ. ಪ್ರಜ್ಞಾ ಪಾತ್ರಧಾರಿಗೂ ನಿರ್ಮಾಪಕ-ನಿರ್ದೇಶಕರ ನಡುವೆ ಯಾವ ಜಿಜ್ಞಾಸೆ ಉಂಟಾಯಿತೋ, ನಟಿಸುತ್ತಿದ್ದ ನಟಿ ನಾಪತ್ತೆ - ಆ ನಟಿ ನಾಪತ್ತೆಯಾದರೇನಂತೆ ಪ್ರಜ್ಞಾಎಂಬ ಕಥಾನಾಯಕಿಯ ರೂಪವೆ ಬದಲಾಗಿಬಿಡುತ್ತದೆ ಬೇರೆ ನಟಿ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಒಮ್ಮೆಲೆ ತೆರೆಯಮೇಲೆ ಕಾಣಿಸಿಕೊಳ್ಳುತ್ತಾಳೆ. ಇದು ಹೇಗೆ ಸಾಧ್ಯ? ಎಂದು ಕೇಳತೊಡಗುತ್ತಾರೆ - ನನ್ನವರು. ನಿಜಜೀವನದಲ್ಲಿ ಅಸಾಧ್ಯ, ಆದರೆ ಟಿ.ವಿ.ಯಲ್ಲಿಸಾಧ್ಯ, ಎಂದು ಉತ್ತರಿಸಿ ಸಮಾಧಾನಗೊಳಿಸಬೇಕಾದರೆ ಸಾಕು ಸಾಕಾಗುತ್ತದೆ. ಹೀಗೆ ರೂಪಾಂತರ ಮಾಡುವ ಬದಲು ಅಮೆರಿಕಾಗೋ, ಮತ್ತೆಲ್ಲಿಗೋ ಕಳುಹಿಸಬಾರದಿತ್ತೇ, ಎಂದೆನ್ನುತ್ತಾರೆ. ನಿರ್ಮಾಪಕರು-ನಿರ್ದೇಶಕರು ಸ್ವಲ್ಪ ಯೋಚಿಸಿ ನನ್ನವರ ತರ್ಕದಂತೆ ಮಾಡಿದರೆ ಚೆನ್ನಾಗಿರ್ತಿತ್ತು, ಎಂದೆನ್ನಿಸುತ್ತದೆ. ನೀನೇನು ಮೆಗಾಧಾರಾವಾಹಿ ನೋಡುತ್ತಾ ಕುಳಿತುಬಿಡುತ್ತೀಯ. ಚರ್ಚೆಗಳಿಲ್ಲ, ಮಾತಿಲ್ಲ, ಕಥೆಯಿಲ್ಲ, ಜಗಳವಿಲ್ಲ, ನೀರಸಜೀವನವಾಗಿದೆ. ತಿಂಡಿ ಇರಲಿ, ಕಾಫೀ ಕೂಡ ಇಲ್ಲವಾಗಿದೆ. ಇವೆಲ್ಲ "ಮೆಗಾ" ಧಾರಾವಾಹಿಗಳಲ್ಲ, "ದಗಾ" ಧಾರಾವಾಹಿಗಳೆಂದು ಟೀಕಿಸುತ್ತಾರೆ. ಇರಲಿ, ಅವರು ಹಾಗೆಂದು ಟೀಕಿಸುತ್ತಾರೆಂದು, ನೋಡುವುದನ್ನು ಬಿಡಲಾದೀತೆ? ಗುಪ್ತ ಗಾಮಿನಿಯ ಭಾವನಾ, ತನ್ನ ಅಪ್ಪ ಯಾರೆಂದು ತಿಳಿದುಕೊಳ್ಳಲು ಒದ್ದಾಡುತ್ತಿರುತ್ತಾಳೆ. ಅಪ್ಪ ಯಾರೆಂದು ಗೊತ್ತಾದ ಮೇಲಾದರೂ ಪಾಪ ಸುಖವಾಗಿರಬೇಡವೇ? ಯಾರೋ ಒಬ್ಬರು ಡುಮ್ಮಂತ ಪ್ರತ್ಯಕ್ಷರಾಗುತ್ತಾರೆ. ಇವನು ಯಾಕೆ ಬಂದ, ಇವನು ಅವನಿಗೆ ಏನಾಗಬೇಕು, ಅವನ ಹೆಂಡತಿ ಇಲ್ಲಿ ಯಾಕಿದ್ದಾಳೆ, ಎಂಬ ಪ್ರಶ್ನೆಗಳಿಗೆ - ಆ ನಿರ್ದೇಶಕನೇನಾದರೂ- ಹತ್ತಿರವಿದ್ದರೆ, ಉತ್ತರಿಸಲಾಗದೆ ತಡಬಡಿಸುತ್ತಿದ್ದ.

ಹಿಂದಿಭಾಷೆಯ ಆ ಪ್ರೇಮಕಥೆಯೋ- ಮುಗಿಯದ ಪ್ರೇಮ. ಪ್ರಸಿದ್ಢ ವೈದ್ಯೆಯ ಗಂಡ, ಅವನಿಗೆ ಒಬ್ಬರನಂತರ ಒಬ್ಬರಂತೆ ಮೂವರು ಹೆಂಡತಿಯರು - ಪ್ರತಿಯೊಬ್ಬರಿಗೂ ಒಂದೊಂದು ಮಗು- ಇದ್ದಕ್ಕಿದ್ದಂತೆ ಅಪಘಾತ - ಪ್ರಸಿದ್ಢವೈದ್ಯೆ ಕುರುಡಿಯಾಗುತ್ತಾಳೆ - ಗಂಡನಿಗೆ ಪಶ್ಚಾತ್ತಾಪ - ಎಲ್ಲರೂ ಅಳುತ್ತಾರೆ- ಇಂತಹ ಮೆಗಾಧಾರಾವಾಹಿ ನೋಡುತ್ತಿರುವೆನಲ್ಲಾ ಎಂದು ನಾನೂ ನನ್ನಬಗ್ಗೆ ಮಮ್ಮಲ ಮರುಗುತ್ತೇನೆ.

ಲಕ್ಷ್ಮೀ, ಅನಂತನಾಗ್ ಚಲನಚಿತ್ರ - ಅವರಿಗೆ ಇಬ್ಬರು ಗಂಡುಮಕ್ಕಳು - ಒಬ್ಬಳೇ ಮಗಳು -ಎಲ್ಲರಿಗೂ ಮದುವೆಯಾಗಿದೆ. ದೊಡ್ಡಮಗನ ಮಗಳು ಸುಮಾರು ಹದಿನೆಂತು-ಇಪ್ಪತ್ತು ವರ್ಷದವಳು - ಕಾಲೇಜಿಗೆ ಹೋಗುತ್ತಿರುತ್ತಾಳೆ. ಅನಂತನಾಗ್ ಲಕ್ಷ್ಮೀಗೆ ಒಂದುಸಂದರ್ಭದಲ್ಲಿ ಹೇಳುತ್ತಾನೆ "ನಿನ್ನನ್ನು ಮದುವೆಯಾಗಿ ಮೂವತ್ತುವರ್ಷಗಳಕಾಲ ಜೊತೆಯಾಗಿದ್ದೀನಿ, ನನ್ನನ್ನು ಅರ್ಥಮಾಡಿಕೊಂಡಿಲ್ಲವೆ?" ಎಂದು. ನನ್ನವರ ಚುರುಕು ಮೆದುಳು ಜಾಗೃತವಾಗುತ್ತದೆ - ಪ್ರಶ್ನೆಯೊಂದು ಬರುತ್ತದೆ - " ಮೊಮ್ಮಗಳು ಕಾಲೇಜಿಗೆ ಹೋಗುತ್ತಾಳೆ- ಅಂದರೆ ಅವಳಿಗೆ ಹದಿನೆಂಟು ವರ್ಷಗಳಾದರೂ ಆಗಿರಬೇಕು - ಅಂದರೆ ಅವಳಪ್ಪ (ಅನಂತನಾಗನ ಮಗ)ನಿಗೆ ನಲವತ್ತು ವರ್ಷವಾದರೂ ಆಗಿರಬೇಕು - ಇವನು(ಅನಂತನಾಗ್) ಮದುವೆಯಾಗಿ ಮೂವತ್ತುವರ್ಷ ಅಂತ ಹೇಳ್ತಾನಲ್ಲಾ ! ಅರ್ಥ ಆಗ್ತಾಇಲ್ಲ." ನನಗೂ ಅರ್ಥ ಆಗ್ತಾ ಇಲ್ಲ, ಎಂದೆ.

ಇನ್ನೊಂದು ಚಲನಚಿತ್ರ - ತಂಗಿ ತುಂಬುಗರ್ಭಿಣಿ - ಅತ್ತೆಯ ಮನೆಯಲ್ಲಿದ್ದಾಳೆ - ಎಲ್ಲರೂ ಅವಳನ್ನು ದೂರಮಾಡಿದ್ದಾರೆ - ಹೊರಕೋಣೆಯಲ್ಲಿ ಒಬ್ಬಳೇ ಇದ್ದಾಳೆ - ಮಧ್ಯರಾತ್ರಿ - ಹೊಟ್ಟೆ ನೋವು ಶುರುವಾಗುತ್ತೆ - ಗಂಡನ ಕೋಣೆಬಾಗಿಲು ತಟ್ಟುತ್ತಾಳೆ -ಕಟುಕ ಗಂಡ ಬಾಗಿಲುತೆರೆದು ದೂಡುತ್ತಾನೆ - ಮಧ್ಯರಾತ್ರಿಯಾದರೂ ದೊಡ್ಡ ಅಂಚಿನ ಕಂಚಿಸೀರೆ ಉಟ್ಟಿರುವ ಅತ್ತೆ ಸೊಸೆಯನ್ನು ಮನೆಯಿಂದ ಆಚೆ ಅಟ್ಟುತ್ತಾಳೆ. ಆ ತಂಗಿ ನೋವಿನಿಂದ ಅಳುತ್ತಾ ಗೋಳಿಡುತ್ತಾ ಅಣ್ಣನ ಮನೆಯ ಬಾಗಿಲು ತಟ್ಟುತ್ತಾಳೆ. ಕರುಣಾಳು ಅಣ್ಣ ಬಾಗಿಲು ತೆರೆದು ತಂಗಿಯನ್ನು ತಬ್ಬಿಕೊಂಡು ಒಳಗೆ ಕರೆತರುತ್ತಾನೆ. ಮರುದಿನ ವೃಂದ ಗಾಯನ, ವೃಂದ ನೃತ್ಯ ನಡೆಸುತ್ತಾನೆ.

ನಮ್ಮವರ ಪ್ರಶ್ನೆಗಳು :-
- ಅಣ್ಣನಮನೆ - ಅತ್ತೆಮನೆ ಒಂದೇ ಊರಾ ?
- ಒಂದೇ ಊರಾದರೆ ಎಷ್ಟು ದೂರ ?
- ಅಷ್ಟು ನೋವಿದ್ದರೂ ಆ ರಾತ್ರಿ ಹೇಗೆ ನಡೆದುಕೊಂಡು ಬರ್ತಾಳೆ ?
- ದಾರೀಲಿ ಯಾರೂ ಇರಲಿಲ್ಲವೇ ?
- ನೋವು-ನೋವು ಅಂತ ನರಳುತ್ತಿದ್ದವಳಿಗೆ ಅಣ್ಣನಮನೆಗೆ ಬಂದ ಕೂಡಲೆ ನೋವು ನಿಂತು ಹೋಯಿತೇ?
- ಹೆರಿಗೆ ನೋವಲ್ಲವೇ ?
- ಅಣ್ಣ ತಂಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಗಾಯನ, ನೃತ್ಯ ನಡೆಸಲು ಹೇಗೆ ಸಾಧ್ಯ ?
ಇನ್ನೇನು ಪ್ರಶ್ನೆಗಳನ್ನು ಎದುರಿಸಬೇಕಾಗುವುದೋ ಎಂದು ಹೆದರಿ ಟಿ.ವಿ.ಯ ನಿಲುವಿನ ಗುಂಡಿಯನ್ನು ಒತ್ತಿದೆ.
ಉತ್ತರಗಳು ನನಗೆ ಗೊತ್ತಿಲ್ಲ.

ಇಂತಹ ಪ್ರಶ್ನೆಗಳನ್ನು ಹಾಕುವ ನನ್ನವರು ಜಾಣ ಪೆಟ್ಟಿಗೆಯ ಪೂರ್ಣ ವಿರೋಧಿಗಳೇನೂ ಅಲ್ಲ. ವಾರ್ತೆಗಳನ್ನು ತಪ್ಪದೆ ನೋಡಿ ರಾಜಕೀಯ ವಿದ್ಯಾಮಾನಗಳನ್ನು ವಿಶ್ಲೇಷಿಸುತ್ತಾರೆ. ಚೆಂಡು-ದಾಂಡು ಪಂದ್ಯವನ್ನು ಅತ್ಯಂತ ಸಂಭ್ರಮದಿಂದ ವೀಕ್ಷಿಸುತ್ತಾ ವಿವರಣೆಯನ್ನು ನೀಡುತ್ತಾರೆ. ದಾಂಡು ಹಿಡಿದುಕೊಂಡಿರುವ ದಾಂಡಿಗನಾದರೂ ಬೀಸಿಬಂದ ಚೆಂಡನ್ನು ನೋಡದೇ ಇರಬಹುದು, ನನ್ನವರ ನೋಟ ಮಾತ್ರ ಕರಾರುವಾಕ್ಕಾಗಿರುತ್ತದೆ. ಪಾಪ ಚೆಂಡುಬಿಟ್ಟ ದಾಂಡಿಗ ನನ್ನವರ ಸಿಟ್ಟಿಗೆ ಗುರಿಯಾಗುತ್ತಾನೆ.