Sarayu's writings in Kannada

Name:
Location: Bangalore, Karnataka, India

Wednesday, August 09, 2006

ಮೆಲುಕು

ಪಟೌಡಿ, ಪ್ರಸನ್ನರವರಕಾಲ, ಐದುದಿನಗಳ ಪಂದ್ಯಾವಳಿಯ ಸಂಭ್ರಮ. ಟಿ.ವಿ. ಮುಂದೆ ಠೀವಿಯಿಂದ ಕೂಡುವ ಕಾಲವಾಗಿರಲಿಲ್ಲ. ಗುರ್ ಗುರ್ ಗುಟ್ಟುವ ಬಾನುಲಿಯ ಮುಂದೆ ಕಿವಿಗೊಟ್ಟು ಎಚ್ಚರಿಕೆಯಿಂದ ಆಲಿಸಬೇಕಾಗಿದ್ದ ಕಾಲವಾಗಿತ್ತು. ವಾಟ್ ನಾಣಿ? ವಾಟ್ ಪಾಚು? ದಟೀಸ್ ಆಲ್ ರೈಟ್ ಚಕ್ರಪಾಣಿ ಎಂದು - ಕುರುಕ್ಷೇತ್ರ ಯುದ್ಧವನ್ನು ಕುರುಡು ಧೃತರಾಷ್ಟ್ರನಿಗೆ ವರ್ಣಿಸುತ್ತಿದ್ದ ಸಂಜಯನಂತೆ- ನಮ್ಮ ಕಣ್ಣುಗಳಮುಂದೆಯೇ ಪಂದ್ಯ ನಡೆಯುತ್ತಿದೆಯೋ ಎನ್ನುವಂತೆ ಅತ್ಯುತ್ಸಾಹದಿಂದ ವರ್ಣಿಸುತ್ತಿದ್ದ ಆ ವೀಕ್ಷಕ ವಿವರಣೆಕಾರರ ಕಾಲವದು. ಸಾಮಾನ್ಯವಾಗಿ ಎಲ್ಲ ಹೋಟೆಲ್‍ಗಳ ಮುಂದೆ ಒಂದು ದೊಡ್ಡ ಗುಂಪಿರುತ್ತಿತ್ತು. ರೇಡಿಯೋ ಕಿವಿಯನ್ನು ಎಷ್ಟೇ ತಿರುವಿದರೂ, ಪಾಪ ಆ ವಿವರಣೆ, ಮುಂದೆ ನಿಂತವರಿಗೆ ಮಾತ್ರ ಸರಿಯಾಗಿ ಕೇಳಿಸುತ್ತಿತ್ತು. ಹಿಂದೆ ನಿಂತವರು ಎಗರಿ-ಎಗರಿ, ಏನಾಯ್ತಂತೆ ಎಂದು ಕಾತರದಿಂದ ಕೇಳುತ್ತಿದ್ದ ಕಾಲ. ನನ್ನಕ್ಕ ಮೂಲೆಯಲ್ಲಿದ್ದ ರೇಡಿಯೋ ಕಿವಿಯನ್ನು ತಾರಕಕ್ಕೆ ತಿರುಗಿಸುತ್ತಿದ್ದಳಲ್ಲದೆ ಟ್ರಾನ್ಸಿಸ್ಟರನ್ನು ಬೇರೆ, ಕಂಕುಳಲ್ಲಿಟ್ಟು ಕೊಂಡು ಹಾಲಿನಿಂದ ರೂಮಿಗೂ- ಅಲ್ಲಿಂದ ಅಡಿಗೆ ಮನೆಗೂ ಶತಪಥ ತಿರುಗುತ್ತಿದ್ದಳು. ಆಗ ಟ್ರಾನ್ಸಿಸ್ಟರ್ ಇನ್ನೂ ಶೈಶ್ಯಾವಸ್ಥೆಯಲ್ಲಿತ್ತು. ಅದರ ಗಾತ್ರ ಆಗಿನ ಕಾಲದ ಚಿಕ್ಕ ರೇಡಿಯೋ ಅಷ್ಟೇ ಇರುತ್ತಿತ್ತು. ಆ ಟ್ರಾನ್ಸಿಸ್ಟರಿಗೋ ಸರಿಯಾದ ಸಮಯದಲ್ಲಿ ಗಂಟಲು ಕೂತುಬಿಡುತ್ತಿತ್ತು. ಹಾಲಿಗೆ ಓಡಿಬಂದು - ರೇಡಿಯೋ ಮುಂದೆ ಏಕಾಗ್ರತೆಯಿಂದ ಕಿವಿಗೊಟ್ಟು ಕೇಳುತ್ತಿದ್ದ ಕ್ರಿಕೆಟ್ ಭಕ್ತವೃಂದದವರನ್ನು- ಏನಾಯ್ತು?- ಯಾರು ಔಟಾದ್ರು?- ಎಂದು ಆತುರದಿಂದ ಕೇಳುತ್ತಿದ್ದಳು. ನಮ್ಮಕ್ಕನ ಸಹಪಾಠಿ ಸುಮಿತ್ರಳ ಬಂಧು ಕ್ರಿಕೆಟ್ ತಂಡದಲ್ಲಿದ್ದರು. ಪಂದ್ಯ ಪ್ರಾರಂಭವಾಯ್ತೆಂದರೆ ಸುಮಿತ್ರಳನ್ನು ಹಿಡಿಯುವವರಿಲ್ಲ - ಎಂದು ನಮ್ಮಕ್ಕನ ಗೆಳತಿಯರು ಟೀಕಾಪ್ರಹಾರ ಮಾಡುತ್ತಿದ್ದರು.

ಟೆಸ್ಟ್ ಸರಣಿ ಶುರುವಾಯಿತೆಂದರೆ, ಚಿನ್ನಿದಾಂಡ್ಲು, ಗೋಲಿ, ಬುಗುರಿ, ಫುಟ್ಬಾಲ್-ಎಲ್ಲಾ ಮೂಲೆ ಸೇರುತ್ತಿದ್ದವು. ಆಗ ಏಕದಿನ ಪಂದ್ಯವಿರಲಿಲ್ಲ. ಪಾಪ ಈಗಿನ ಹಾಗೆ ಹುಡುಗರಿಗೆ ಕೋಚಿಂಗ್ ಕೋರ್ಸ್ ಕೂಡ ಇರಲಿಲ್ಲ. ಹುಡುಗರೆಲ್ಲಾ ಮುಂದಿನ ಪಟೌಡಿ, ಪ್ರಸನ್ನರು ತಾವೆ ಎನ್ನುವಂತೆ ಕನಸು ಕಾಣುತ್ತಾ, ಓಡಾಡುವಾಗಲೆಲ್ಲಾ ಬರೇ ಕೈಗಳಲ್ಲೇ ಬ್ಯಾಟಿಂಗ್, ಬೌಲಿಂಗ್ ಮಾಡುತ್ತಿದ್ದರು. ನನ್ನ ತಮ್ಮ ಈರೀತಿ ಮನೆಯಲ್ಲಿ ಬೌಲಿಂಗ್ ಪ್ರ್ಯಾಕ್ಟೀಸ್ ಮಾಡುವಾಗ, ಅಪರೂಪಕ್ಕೆ ಆಗಮಿಸಿದ್ದ ಅಜ್ಜಿಯೊಬ್ಬರು ಅಕಸ್ಮಾತ್ ಇವನಬೌಲಿಂಗ್‍ಗೆ ಅಡ್ಡ ಬಂದಾಗ ಅವರ ಕೆನ್ನೆಗೆ ಜೋರಾಗಿ ಬಾರಿಸಿದ್ದಲ್ಲದೆ ಅವರ ದವಡೆ ಹಲ್ಲು ದೊಪ್ಪಂತ ಉದುರುವಂತೆ ಮಾಡಿದ. ಕಡುಬಿನಂತೆ ಊದಿದ ಅವರ ಕೆನ್ನೆ ಯತಾಸ್ಥಿತಿಗೆ ಬರುವವರೆಗೆ ನನ್ನ ತಮ್ಮ ಎಲ್ಲರಿಂದ ಬೈಸಿಕೊಳ್ಳುತ್ತಲೇಇದ್ದ.

ನಮ್ಮ ದೇಶಕ್ಕೆ ವೆಸ್ಟ್‍ಇಂಡೀಸ್ನವರ ಆಗಮನವಾಗಿತ್ತು. ಮೊದಲ ಪಂದ್ಯಾವಳಿಯೋ, ಎರಡನೆಯದೋ ನೆನೆಪಿಲ್ಲ- ಅವರ ಬೌನ್ಸ್ ಬೌಲಿಂಗ್‍ಗೆ ನಮ್ಮ ಆಟಗಾರರು ಬೆದರಿ ಬ್ಯಾಟನ್ನು ಬಿಟ್ಟು ಬಂದುಬಿಡುತ್ತಿದ್ದಾರೆ ಎಂದು ನಮ್ಮ ತಂದೆ, ನಮ್ಮಣ್ಣಂದಿರು- ರೇಡಿಯೋ ಮುಂದೆ ಕುಳಿತು ಚರ್ಚಿಸುತ್ತಿದ್ದರು. ಒಂದು ದಿನ ಮಟ-ಮಟ ಮಧ್ಯಾಹ್ನ ಇದ್ದಕ್ಕಿದ್ದಂತೆ, ಪೆಟ್ಟು ತಿಂದ ಪ್ರಾಣಿಯಂತೆಚೀರಿ ಕೆಳಗುರುಳಿದ ರೇಡಿಯೋ ಸದ್ದನ್ನು ಕೇಳಿ, ಏನಾಯಿತೋ ಎಂದು ಗಾಭರಿಯಿಂದ ಅಡಿಗೆಮನೆಯಲ್ಲಿದ್ದ ನನ್ನ ತಾಯಿ ಹಾಲಿಗೆ ಧಾವಿಸಿ ನೋಡಿದಾಗ, ನಮ್ಮ ತಂದೆ ದೂರ್ವಾಸ ಮುನಿಯಂತೆ ರೋಷಗೊಂಡಿದ್ದಾರೆ- ಆ ಸ್ಥಿತಿಯಲ್ಲಿ ಅವರನ್ನು ಮಾತನಾಡಿಸಲು ನನ್ನ ತಾಯಿಗೆ ಧೈರ್ಯವಿರಲಿಲ್ಲ. "ಒಬ್ರಾದ್ರೆ ಸರಿ, ತುಪು ತುಪೂಂತ ಒಟ್ಟಿಗೆ ಆರುಜನ ಔಟಾದ್ರೇ - ಗೆಲ್ತಾರ ಇವ್ರು?"ಎಂದು ಸಿಡುಗುಟ್ಟುತ್ತಿದ್ದರು, ನಮ್ಮವರು ಸಾಲಾಗಿ ಒಬ್ಬರನಂತರ ಒಬ್ಬರು, ಒಂದು ರನ್ನೂ ಮಾಡ್ದೆ ಔಟಾದಾಗ. ಕಾಮೆಂಟ್ರಿ ಕೇಳುತ್ತ ಕುಳಿತಿದ್ದ ನನ್ನ ತಂದೆಗೆ ಸಿಟ್ಟು ಮುಗಿಲೇರಿ ರೇಡಿಯೋ ಮೇಲೆ ಬಲ ಪ್ರಯೋಗ ಮಾಡಿದ್ದರು. ಆಗ ಅವರನ್ನು ತಡೆಯಲು ಪಕ್ಕದಲ್ಲಿ ನನ್ನಣ್ಣಂದಿರು ಇರಲಿಲ್ಲ - ಕಾಲೇಜಿಗೆ ಹೋಗಿದ್ದರು. ನಮ್ಮಣ್ಣಂದಿರು ಪ್ರತಿ ಬುಧುವಾರ ರೇಡಿಯೋ ಸಿಲೋನಿನಿಂದ ರಾತ್ರಿ ಎಂಟುಗಂಟೆಗೆ ಬಿತ್ತರವಾಗುತ್ತಿದ್ದ ಬಿನಾಕ ಗೀತ್‍ಮಾಲ ಮಾತ್ರ ಪರೀಕ್ಷೆಯ ಸಮಯದಲ್ಲೂ ಸಹ ತಪ್ಪದೆ ಕೇಳುತ್ತಿದ್ದರು. ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ನಮ್ಮೆಲ್ಲರ ನೆಚ್ಚಿನ " ನಿಮ್ಮ ಮೆಚ್ಚಿನ ಚಿತ್ರ ಗೀತೆ"ಗಳನ್ನು ಆಲಿಸಲು ಬಹು ಉತ್ಸಾಹದಿಂದ ರೇಡಿಯೋ ಮುಂದೆ ಕಾತುರದಿಂದ ಕಾಯುತ್ತಿದ್ದೆವು. ನನ್ನ ತಂದೆಗೆ ಪ್ರಿಯವಾದುದ್ದು- ವಾರ್ತಾ ಪ್ರಸಾರ. ಆಸಮಯದಲ್ಲಿ ಮನೆಯಲ್ಲಿ ಯಾರೂ ಜೋರಾಗಿ ಮಾತನಾಡುವಂತಿರಲಿಲ್ಲ. ಪೆಟ್ಟು ತಿಂದು ಕೆಳಗೆ ಬಿದ್ದಿದ್ದ ಆ ರೇಡಿಯೋ- ಚಿಕಿತ್ಸಾಲಯಕ್ಕೆ ಹೋಗಿ, ಹಿಂತಿರುಗಲು ಹದಿನೈದು ದಿನಗಳೇ ಹಿಡಿದವು. ಅಲ್ಲಿಯವರೆಗೆ ನನ್ನಕ್ಕನ ಕಂಕುಳಲ್ಲಿ ಸದಾ ಅಲಂಕರಿಸಿದ್ದ ಆ ಟ್ರಾನ್ಸಿಸ್ಟರೇ ನಮ್ಮೆಲ್ಲರ ಕೋರಿಕೆಯನ್ನು ನೆರವೇರಿಸಬೇಕಾಗಿತ್ತು.

ಇಂತಹ ಒಂದು ಕ್ರಿಕೆಟ್ ಪಂದ್ಯಾವಳಿಯ ಸರಣಿ ಸಮಯ; ಎಲ್ಲಿ ನೋಡಿದರೂ ಕ್ರಿಕೆಟ್ ಎಂಬ ಸಾಂಕ್ರಾಮಿಕ ಜ್ವರ ಹರಡಿತ್ತು. ಆಗ ಕುಂಟೆಬಿಲ್ಲೆ ಆಡುತ್ತಿದ್ದ ನಮ್ಮ ಮುಂದೆ "ನಾವೂ ಯಾಕೆ ಕ್ರಿಕೆಟ್ ಆಡಬಾರದು?" ಎಂಬ ಪ್ರಶ್ನೆಯನ್ನು ಶಾಂತಿ ಇಟ್ಟಳು. ನಾವಾಗ ಏಳನೇ ತರಗತಿಯಲ್ಲಿದ್ದೆವು. "ಯಾಕಾಡ್ಬಾರ್ದೆ? - ಅದೇನು ಮಹಾಕಷ್ಟವಾದ ಆಟಾನಾ? - ಆಕಡೆಯಿಂದ ಬಾಲ್ ಎಸೆದರೆ ಈ ಕಡೆಯಿಂದ ಹೊಡೆಯೋದು-ಅಷ್ಟೆ. ನಾವೂ ಯಾಕೆ ಆಡ್ಬಾರ್ದು?"ಎಂಬ ಶಾಂತಿಯ ಸೂಚನೆಗೆ ಒತ್ತು ಕೊಟ್ಟಳು ಎಡಚಿ ವಸಂತ. ಅವಳು ಬರೆಯುತ್ತಿದ್ದುದ್ದು ಎಡಗೈಯಲ್ಲಿ. ಅವಳ ಎಡಗೈ ಒಂದರ ಬಲದ ಮುಂದೆ ನಮ್ಮ ಎರಡು ಕೈಗಳ ಬಲ ಏನೇನು ಅಲ್ಲ. ಅಂತಹ ಶಕ್ತಿ ಅವಳ ಎಡಗೈಯಲ್ಲಿತ್ತು.

"ನಾಳೇನೇ ಪಿ.ಟಿ. ಟೀಚರ್ ಹತ್ರ ಹೋಗಿ ಬ್ಯಾಟ್-ಬಾಲ್ ತರಿಸಿಕೊಡಿ ಅಂತ ಗಲಾಟೆ ಮಾಡೋಣ" ಗಟಾಣಿ ಎಂದು ಬಿರುದು ಪಡೆದಿದ್ದ ಗೌರಿ ಉತ್ಸಾಹದಿಂದ ಅಂದಳು. ಕುಂಟೆಬಿಲ್ಲೆ ಆಟವನ್ನು ಅರ್ಧಕ್ಕೆ ನಿಲ್ಲಿಸಿ, ಇದರ ಬಗ್ಗೆ ಯಾವರೀತಿ ಮುಂದುವರೆಯಬೇಕೆಂದು ಚರ್ಚಿಸಿದೆವು.

ಮರುದಿನ ತರಗತಿಯಲ್ಲಿ ಪಾಠದ ಕಡೆ ಗಮನ ಕೊಡದೆ ಗುಸು-ಗುಸು ಚರ್ಚಿಸುತ್ತಿದ್ದ ನಮ್ಮನ್ನು ನಿಲ್ಲಿಸಿ ಪಾಠದ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸದೆ ಹೋದೆವು. ಗಮನವಿಟ್ಟು ಪಾಠ ಕೇಳಿದ್ದರೆ ತಾನೆ ಉತ್ತರಿಸುವುದು. ಬೆಲ್ ಬಾರಿಸುವವರೆಗೂ ಬೆಂಚಿನಮೇಲೆ ನಿಂತುಕೊಂಡು ಕಾಲು ನೋಯಿಸಿಕೊಂಡೆವು. ಆ ದಿನದ ಪಾಠಗಳು ಹೇಗೋ ಮುಗಿದವು. ಕೊನೆಯ ಪೀರಿಯಡ್ಡೇ ಪಿ.ಟಿ. ಹುರುಪಿನಿಂದ ಪಿ.ಟಿ. ಟೀಚರಿದ್ದಕಡೆ ಓಡಿದೆವು. ಹತ್ತು ಹುಡುಗಿಯರು ಒಟ್ಟಿಗೆ ಮುತ್ತಿಗೆ ಹಾಕಿದ್ದು ನೋಡಿ ಅವರಿಗೆ ಆಶ್ಚರ್ಯವಾಯಿತು. ಯಾಕೆಂದರೆ ಪಿ.ಟಿ. ಪೀರಿಯಡ್ ಬಂತೆಂದರೆ ಒಂದಲ್ಲ ಒಂದು ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವುದೇ ಹೆಚ್ಚಾಗಿತ್ತು. "ಏನು- ಎಲ್ರೂ ಒಟ್ಟಾಗಿ ಬಂದ್ಬಿಟ್ಟಿದ್ದೀರಿ- ಲೈನ್ ಫಾರಂ ಮಾಡಿ" ಎಂದು ಆಜ್ಞಾಪಿಸಿದರು ಪಿ. ಟಿ. ಟೀಚರ್.

"ಸರ್ ನಮಗೆ ಬ್ಯಾಟು-ಬಾಲು ಬೇಕು" ಎಂದು ಒಕ್ಕೊರಲಿನಿಂದ ಕಿರುಚಿದೆವು.

"ಬ್ಯಾಟು-ಬಾಲು ಯಾಕೆ?" ಆಶ್ಚರ್ಯದಿಂದ ಕೇಳಿದರು.

"ಕ್ರಿಕೆಟ್ ಆಡೋಕೆ" ಅಂತೆಂದೆವು ಜೋರಾಗಿ.

"ಕ್ರಿಕೆಟ್ ಆಡೋಕೆ?"

"ಹೌದು ಸರ್- ನಾವೇನು ಕ್ರಿಕೆಟ್ ಆಡ್ಬಾರ್ದೇ? ಬರೇ ಹುಡುಗರೇ ಆಡ್ಬೇಕೂಂತ ಏನಾದ್ರೂ ರೂಲ್ಸಿದೆಯೇ?" ಗಟಾಣಿ ಗೌರಿ ಎತ್ತರದ ದನಿಯಲ್ಲಿ ಕೇಳಿದಳು.

"ಹೌದಮ್ಮ ಅದು ಹುಡುಗರ ಆಟ. ಹುಡುಗಿಯರು ಆಡಿದ್ದನ್ನು ಎಲ್ಲಾದರೂ ನೋಡಿದ್ದೀರಾ, ಇಲ್ಲ ಕೇಳೀದ್ದೀರಾ?" ಪಿ. ಟಿ . ಟೀಚರ್ ಮೆಲುದನಿಯಲ್ಲಿ ಹೇಳಿ ನಮ್ಮನ್ನು ಕಳುಹಿಸಲು ನೋಡಿದರು. ಕ್ರಿಕೆಟ್ ಹುಡುಗರ ಆಟವೆಂದೇ ತಿಳಿದಿದ್ದ ಕಾಲವದು.

"ನಾವೂ ಆಡ್ತೀವಿ ಸರ್, ಯಾಕಾಡ್ಬಾರ್ದು?" ಎಲ್ಲರೂ ಒಟ್ಟಾಗಿ ಸೂರುಹಾರಿಹೋಗುವಂತೆ ಕಿರಚಿದೆವು.

" ಥ್ರೋ ಬಾಲ್, ಷಟಲ್ಸ್, ರಿಂಗ್, ಬಾಲ್ ಬ್ಯಾಡ್ಮಿಂಟನ್, ಇನ್ನೂ ಬೇಕಾದಷ್ಟು ಹುಡುಗಿಯರು ಆಡೋ ಆಟಗಳಿವೆ. ನಿಮಗೆ ಇನ್ನೂ ಒಂದು ಥ್ರೋ ಬಾಲ್ ಕೋರ್ಟ್ ಮಾಡಿಸಿ ಕೊಡ್ತೀನಿ. ಕ್ರಿಕೆಟ್ ಬೇಡ" ಎಂದು ಉಪದೇಶ ನೀಡಿದಿರು. ನಾವು ಜಗ್ಗಲಿಲ್ಲ.

"ಸರಿ ಹೆಡ್‍ಮಾಸ್ಟರ್ ಹತ್ತಿರ ಹೋಗೋಣ- ಏನ್ಹೇಳ್ತಾರೋ ಹಾಗೆ ಮಾಡಿ" ಎಂದು ನಮ್ಮನ್ನೆಲ್ಲಾ ಕರೆದುಕೊಂಡು ಹೆಡ್‍ಮಾಸ್ಟರ್ ಮುಂದೆ ನಿಲ್ಲಿಸಿದರು.

ನಮ್ಮದು ಬಾಲಕಿಯರ ಸರ್ಕಾರಿ ಕನ್ನಡ ಮಾಧ್ಯಮಿಕ ಶಾಲೆ. ಈಗಿನಂತೆ ಹಾದಿಗೊಂದು ಬೀದಿಗೊಂದು ಇಂಗ್ಲೀಷ್ ಸ್ಕೂಲಿರಲಿಲ್ಲ. ನಮ್ಮ ಕ್ಷೇತ್ರದ ಶಾಸಕರ ಮಗಳು, ಮೀನಾಕ್ಷಿ, ನಮ್ಮ ಸಹಪಾಠಿಯಾಗಿದ್ದಳಲ್ಲದೆ ನಮ್ಮ ಗುಂಪಿನಲ್ಲಿ ಇದ್ದಳು. ಇಂದಿನ ರಾಜಕಾರಿಣಿಗಳಹಾಗೆ ಡಂಭಾಚಾರ ಅವರ ಮನೆಯವರಿಗೆ ಇರಲಿಲ್ಲ - ಬಲು ಸರಳ ಜೀವಿಗಳು. ಮೀನಾಕ್ಷಿಯ ತಾಯಿ ನಮ್ಮನ್ನೆಲ್ಲಾ ತುಂಬಾ ವಿಶ್ವಾಸ-ಪ್ರೀತಿಯಿಂದ ಕಾಣುತ್ತಿದ್ದರು. ಶಾಸಕರೂ ಸಹ ಮುಗಳ್ನಗೆಯಿಂದ ನಮ್ಮ "ಪಟಾಲಂ"ಅನ್ನು ಮಾತನಾಡಿಸುತ್ತಿದ್ದರು.

ನಮ್ಮ ಮಾಧ್ಯಮಿಕಶಾಲೆಯ ಮುಖ್ಯೋಪಾಧ್ಯಾಯರು ಬಲು ಸಾಧು ಸ್ವಭಾವದವರು. ಕಚ್ಚೆ ಪಂಚೆ, ಜುಬ್ಬ, ಕರಿ ಕೋಟು, ತಲೆಗೊಂದು ಕರಿ ಟೋಪಿ- ಇವೇ ಅವರ ಉಡುಪು. ಲೋಹದ ಕಟ್ಟಿನ ಕನ್ನಡಕ ಮೂಗಿನ ಮೇಲೆ ಸದಾ ಅಲಂಕರಿಸಿತ್ತು.
ನಮ್ಮ ಬೇಡಿಕೆಯನ್ನು ಕೇಳಿ ಮೃದುವಾಗಿ ಉಪದೇಶವನ್ನಿತ್ತರು. ನಾವು ಜಗ್ಗಲಿಲ್ಲ. ಶಾಸಕರ ಮಗಳು ಮೀನಾಕ್ಷಿಯೂ ನಮ್ಮೊಡನೆ ದನಿಗೂಡಿಸಿದ್ದಳು. ಮೀನಾಕ್ಷಿಯ ತಂದೆ ಮಂತ್ರಿಯಾಗುವ ಸಾಧ್ಯತೆಯೂ ಇತ್ತು. ಅವಳ ಪ್ರಭಾವದಿಂದಲೋ ಇಲ್ಲ ನಮ್ಮೆಲ್ಲರ ಒಗ್ಗಟ್ಟಿನ ಬಲದಿಂದಲೋ - ಒಟ್ಟಿನಲ್ಲಿ ಮರುದಿನ ನಮಗೆ ಬ್ಯಾಟು-ಬಾಲು, ವಿಕೆಟ್ಟು ಇತ್ಯಾದಿಗಳನ್ನು ಪಿ.ಟಿ. ಟೀಚರ್ ತರಿಸಿಕೊಟ್ಟರು.

ಆಡುವುದೆಲ್ಲಿ ಎಂಬ ಪ್ರಶ್ನೆ ಎದ್ದಿತು. ಪಿ.ಟಿ. ಟೀಚರ್, ಹೆಡ್ಮಾಸ್ಟರ್ "ಬ್ಯಾಟು-ಬಾಲು, ವಿಕೆಟ್ಗಳನ್ನು ಕೇಳಿದಿರಿ. ತರಿಸಿಕೊಟ್ಟಿದ್ದೀವಿ. ಫೀಲ್ಡ್ ನೀವೇ ನೋಡ್ಕೋಬೇಕು. ಪ್ರೇಯರ್ ಮಾಡೋ ಜಾಗ್ದಲ್ಲಿ, ಪಿ.ಟಿ. ಗ್ರೌಂಡ್ನಲ್ಲಿ, ಇಲ್ಲ ಥ್ರೋಬಾಲ್ ಕೋರ್ಟ್‍ನಲ್ಲಿ ನೀವು ಆಡ್ಬಾರ್ದು" ಎಂದು ಆಜ್ಞಾಪಿಸಿದರು.

ಆಗ ಶಾಲೆಯ ಮುಂದೆ ವಿಶಾಲವಾದ ಮೈದಾನವಿತ್ತು. ಅದರಲ್ಲಿ ಅರ್ಧಭಾಗದಷ್ಟು ಮಾತ್ರ ಶಾಲೆ ಉಪಯೋಗಿಸುತ್ತಿತ್ತು. ಮಿಕ್ಕ ಪ್ರದೇಶದಲ್ಲಿ ಕಲ್ಲು ಮುಳ್ಳು ಯಥೇಚ್ಛವಾಗಿತ್ತು. ಆ ಕಲ್ಲು ಮುಳ್ಳುಗಳಿಂದ ಆವೃತವಾಗಿದ್ದ ಜಾಗವನ್ನೇ ಒಪ್ಪಮಾಡಿ ನಮ್ಮ ಕ್ರಿಕೆಟ್ ಫೀಲ್ಡ್ ಮಾಡೋಣವೆಂದು ತೀರ್ಮಾನಿಸಿದೆವು.

ಮರುದಿನ ಭಾನುವಾರ, ಬೆಳಿಗ್ಗೆ ಎಂಟು ಗಂಟೆಗೆ ಏಳುವ ಸಂಪ್ರದಾಯ ಪಾಲಿಸುತ್ತಿದ್ದ ನಾನೂ ಸಹ ಬೆಳಿಗ್ಗೆ ಆರು ಗಂಟೆಗೆ ಎದ್ದು, ಏಳು ಗಂಟೆಗೆ ಹಿತ್ತಲಲ್ಲಿದ್ದ ಕತ್ತಿಯನ್ನು ಪೇಪರಿನಲ್ಲಿ ಸುತ್ತಿಕೊಂಡು ಹೊರಟೆ. ಶಾಂತಿ ಹಳೇ ಬಿದಿರು ಬುಟ್ಟಿ ತಂದಳು. ವಸಂತಳ ಕೈಯಲ್ಲಿ ಪೊರಕೆ ಇತ್ತು. ಹೀಗೆ ಒಬ್ಬೊಬ್ಬರೂ ಒಂದೊಂದನ್ನು ಹಿಡಿದುಕೊಂಡು, ಶ್ರಮದಾನಕ್ಕೆ ಹೊರಟ ಶ್ರಮ ಜೀವಿಗಳಂತೆ ತೆರಳಿದೆವು. ಸಬೂಬಿನಿಂದ ದೂರ‍ಉಳಿಯಲು ಯತ್ನಿಸಿದ ಸೋಮಾರಿ ಸರೋಜಳನ್ನು ಎಳೆದುಕೊಂಡು ಹೊರಟೆವು. ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಪುನಃ ನಮ್ಮ ಕ್ರಿಕೆಟ್ ಫೀಲ್ಡ್ ತಯಾರಿಗೆ ಪಾದ ಬೆಳೆಸಿದೆವು. ಸುಸ್ತಾಗಿ ಸಾಯಂಕಾಲ ಮನೆಗೆ ಬಂದು ಸೇರಿದಾಗ ಆರಾಗಿತ್ತು.

ಮಾರನೆಯದಿನ ಸೋಮವಾರ. ಶಾಲಾಸಮಯದನಂತರ ನಮ್ಮ ಆಟ ಅತ್ಯುತ್ಸಾಹದಿಂದ ಆರಂಭವಾಯಿತು. ನಾವು ಹತ್ತುಜನ ಹುಡುಗಿಯರು- ಎರಡು ಟೀಮ್ ಮಾಡಿಕೊಂಡೆವು. ಒಂದು ಟೀಮಿಗೆ ಶಾಂತಿ ಕ್ಯಾಪ್ಟನ್ ಎಂದು ಸರ್ವಾನುಮತದಿಂದ ಆಯ್ಕೆ ಮಾಡಿದ್ದೆವು. ಅವಳಣ್ಣ ರಣಜಿ ಆಟಗಾರ ಆಗಿದ್ದುದರಿಂದ, ಶಾಂತಿ ಕ್ರಿಕೆಟ್ ಕಾನೂನುಗಳನ್ನು ಚೆನ್ನಾಗಿ ತಿಳಿದುಕೊಂಡಿರುವ ಪ್ರವೀಣೆ ಎಂಬುದು ನಮ್ಮೆಲ್ಲರ ಅನಿಸಿಕೆ. ಮತ್ತೊಂದು ಟೀಮಿಗೆ ಗಟಾಣಿ ಗೌರಿ ಕ್ಯಾಪ್ಟನ್ ಎಂದು ತೀರ್ಮಾನಿಸಿದೆವು. ಯಾಕೆಂದರೆ ಅವಳ ಜೋರಿಗೆ ನಾವು ತಲೆ ಬಾಗಿಸುತ್ತಿದ್ದೆವು. ಹೀಗೆ ಎರಡು ಟೀಮುಗಳಾದವು. ಟಾಸ್ ಹಾಕಿ ಆಟ ಪ್ರಾರಂಭಿಸಿಯೇಬಿಟ್ಟೆವು. ಶಾಂತಿ ಟಾಸ್ ಗೆದ್ದು ಬ್ಯಾಟಿಂಗ್ ಎಂದಳು. ನಾನು ಗೌರಿಯ ಕಡೆ ಇದ್ದೆ. ಕ್ಯಾಪ್ಟನ್ಸ್‍ಗಳಿಂದಲೇ ಆಟ ಶುರುವಾಗಲಿ ಎಂಬ ತೀರ್ಮಾನಕ್ಕೆ ಬಂದೆವು. ಶಾಂತಿ ಬ್ಯಾಟಿಂಗ್ - ಗೌರಿ ಬೌಲಿಂಗ್. ನಮ್ಮ ಟೀಮಿನ ಇತರೆ ನಾಲ್ವರು ಫೀಲ್ಡಿಂಗ್ ಮಾಡಲು ನಿಂತೆವು. ಈಗಿನ ಕಾಲದ ಹುಡುಗಿಯರಂತೆ ಚೂಡಿದಾರ, ಜೀನ್ಸ್ ಪ್ಯಾಂಟ್ ಇತ್ಯಾದಿ ಉಡುಪುಗಳನ್ನು ಕಂಡವರಲ್ಲ. ಜೊತೆಗೆ ಶಾಲೆಯಲ್ಲಿ ಸಮವಸ್ತ್ರದ ಕಾನೂನೂ ಇರಲಿಲ್ಲ. ನಾವೆಲ್ಲರೂ ಲಂಗ, ಬ್ಲೌಸ್‍ನವರು. ಅಂದಿನ ಪದ್ಧತಿಯಂತೆ ಲಂಗ ಹಿಮ್ಮಡಿಯವರೆಗೂ ಇರಬೇಕಿತ್ತು. ಓಡುವಾಗ ಕಾಲಿಗೆ ತೊಡರುತ್ತಿದ್ದ ಲಂಗವನ್ನು ಮಡಚಿ ಪಿನ್ನಿನಿಂದ ಸಿಕ್ಕಿಸಿ ಉದ್ದವನ್ನು ಕಡಿಮೆಮಾಡಿಕೊಂಡು, ವೀರಮಹಿಳೆ ಕಿತ್ತೂರು ಚೆನ್ನಮ್ಮನಂತೆ ನಿಂತೆವು. ಬಾಬ್‍ಕಟ್ ಬಾಯ್‍ಕಟ್‍ಗೆ ನಿಷೇಧವಿದ್ದ ನಮ್ಮಕಾಲದಲ್ಲಿ ಪ್ರತಿದಿನ ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿ ಬಿಗಿಯಾಗಿ ಎರಡು ಜಡೆಗಳನ್ನು ಹೆಣೆದು - ಜಡೆಗಳ ತುದಿಗೆ ಕರಿ ಟೇಪನ್ನು ಕಟ್ಟುತ್ತಿದ್ದರು ನನ್ನತಾಯಿ. ಎಷ್ಟೋಸಲ ಎಣ್ಣೆ, ಮುಖದ ಮೇಲೂ ಇಳಿಯುತ್ತಿತ್ತು. ಶಾಂತಿಯ ಎರಡು ಉದ್ದನೆ ಜಡೆಗಳು ಮಂಡಿಯ ವರೆವಿಗೂ ತೂಗಾಡುತ್ತಿದ್ದವು. ಆಟಕ್ಕೆ ಅಡಚಣೆಯಾಗುತ್ತದೆಂದು ಜಡೆಗಳನ್ನು ಮೇಲಕ್ಕೆ ಕಟ್ಟಿ ಗಂಟುಹಾಕಿದ್ದಳು.

ಶಾಂತಿಯ ಸೊಂಪು ಕೂದಲು- ನೋಡಿದವರ ಕಣ್ಣು ಸೆಳೆಯುತ್ತಿತ್ತು. ಆ ಸೊಂಪು ಕೂದಲನ್ನು ಇಳಿಬಿಟ್ಟು ಕೊಂಡು ಅಕ್ಕಮಹಾದೇವಿಯ ಪಾತ್ರ ಮಾಡಿ ಆಕೆಯ ವಚನವನ್ನು ಸುಶ್ರಾವ್ಯ ವಾಗಿ ಹಾಡಿ ಅಂತರ ಶಾಲಾ ವೇಷ-ಭೂಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗಿಟ್ಟಿಸಿ ಶಾಲೆಯ ಘನತೆಯನ್ನು ಹೆಚ್ಚಿಸಿದ್ದಳು. ಅವಳಿಗೆ ತರಬೇತಿ ನೀಡಿದ್ದ ಕನ್ನಡ ಟೀಚರ್ ಲಕ್ಷಮ್ಮ ಹೆಮ್ಮೆಯಿಂದ ಅವಳ ಬೆನ್ನು ತಟ್ಟಿದ್ದರು. ಅವಳ ಸೊಂಪು ಕೂದಲನ್ನೇ ಮನದಲ್ಲಿಟ್ಟುಕೊಂಡು ಲಕ್ಷಮ್ಮನವರು "ಅಶೋಕವನದಲ್ಲಿ ಸೀತೆ"ಎಂಬ ನಾಟಕವನ್ನು ರಚಿಸಿ ನಮ್ಮೆಲ್ಲರಿಂದ ಮಾಡಿಸಿದ್ದರು. ಅಶೋಕ ವನದಲ್ಲಿ ಶ್ವೇತ ಧಾರಿಣಿಯಾಗಿ - ಕೂದಲನ್ನು ಬೆನ್ನು, ಹೆಗಲು ಮತ್ತು ತೊಡೆಯಮೇಲೆ ಹರಿಸಿಕೊಂಡು ಮರದ ಕೆಳಗೆ ಚಿಂತಾಕ್ರಾಂತಳಾಗಿ ಕುಳಿತಿದ್ದಾಳೆ ಸೀತೆಯ ಪಾತ್ರಧಾರಿ ಶಾಂತಿ. ನಾಲ್ಕು ಹುಡುಗಿಯರನ್ನು ಸೀತೆಯ ಸುತ್ತಲೂ - ಸಖಿಯರಂತೆ ನಿಲ್ಲಿಸಿದರು. ಆ ಸಖಿಯರಲ್ಲಿ ನಾನೂ ಒಬ್ಬಳಿದ್ದೆ. ರಾಮ ಭಕ್ತ ಹನುಮಂತ ಹಾರಿ ಬರುತ್ತಾನೆ. ಗೌರಿ ಆ ಪಾತ್ರದಿಂದ ಎಲ್ಲರ ಮೆಚ್ಚುಗೆ ಪಡೆದಳು. ನಾವು ಹನುಮಂತನ ರೂಪವನ್ನು ನೋಡಿ ಬೆದರಿ ಓಡಬೇಕಿತ್ತು - ಓಡಿದೆವು. ನಂತರ ಹನುಮಂತ-ಸೀತೆಯರ ಸಂಭಾಷಣೆ ಮುಂದುವರೆಯಿತು. ನಾಟಕ ಬಲು ಸೊಗಸಾಗಿ ಮೂಡಿ ಬಂತು. ನಾಟಕ ಮುಗಿದ ನಂತರ ಪ್ರೇಕ್ಷಕರೊಬ್ಬರು ಬಂದು - ಶಾಂತಿಯ ಕೂದಲನ್ನು ನೇವರಿಸಿ - ಅವಳ ಸೊಂಪು ಕೂದಲು ಕೃತಕವಲ್ಲ, ನೈಜ ಎಂಬುದನ್ನು ಧೃಡ ಪಡಿಸಿಕೊಂಡರು.

ಆಟವಾಡಲು ನಾವೆಲ್ಲರೂ ಸೈನಿಕರಂತೆ ಸಜ್ಜಾದೆವು. ಗೌರಿ ಓಡಿ ಬಂದು ಬಾಲ್ ಬೀಸಿದಳು- ಶಾಂತಿ ಅದನ್ನು ಬಾರಿಸಿದ ರಭಸಕ್ಕೆ ಆ ಬಾಲು ಮೇಲೆ ಹಾರಿ ಎಲ್ಲೋ ಅಡಗಿಕೊಂಡಿತು. ಫೀಲ್ಡ್ ಮಾಡುವವರು ಹುಡುಕಿ ತರಬೇಕು ಎಂದು ಆಜ್ಞಾಪಿಸಿದರು. ಪೊಟರೆಯಲ್ಲಿದ್ದ ಆ ಬಾಲನ್ನು ತರುವವರೆಗೂ ಶಾಂತಿ - ವಸಂತ ಆ ಕಡೆಯಿಂದ- ಈ ಕಡೆಗೆ, ಈ ಕಡೆಯಿಂದ-ಆ ಕಡೆಗೆ ಓಡಿ, ರನ್ಸ್ ಮಾಡುತ್ತಲೇ ಇದ್ದರು. ಒಟ್ಟಿಗೆ ಇಪ್ಪತ್ತು ರನ್‍ಗಳನ್ನು ಪೇರಿಸಿಬಿಟ್ಟರು. ಮತ್ತೊಂದುಸಲ ಗೌರಿಯ ಬಾಲು "ಓಡಲಾರೆ" ಎಂದು ಹಟ ಹಿಡಿದು ಕುಳಿತುಬಿಟ್ಟಿತು. ಹತ್ತು ಬೌಲಿಂಗ್ ಅವರದಾದನಂತರ "ನಮ್ಮ ಟೀಮ್ ಬ್ಯಾಟಿಂಗ್" ಎಂದು ಜೋರು ಮಾಡಿದೆವು.

ವಸಂತ ಎಡಗೈ‍ಯಿಂದ ಬೌಲ್ ಮಾಡಲು ಹೊರಟಾಗ, ಎಡಗೈ‍ಯಿಂದ ಬೌಲ್ ಮಾಡುವಂತಿಲ್ಲ ಎಂದು ನಮ್ಮ ಟೀಮಿನವರು ಪ್ರತಿಭಟಿಸಿದೆವು. ಕ್ಯಾಪ್ಟನ್ ಶಾಂತಿ ಬೌಲ್ ಮಾಡಿದಳು. ಗೌರಿ ಬಲು ಸೂಕ್ಷ್ಮದಿಂದ ಬ್ಯಾಟ್ ಮಾಡಿದಳು. ಆ ಬಾಲು ಅವಳ ಮುಂದೆ ನಮ್ರತೆಯಿಂದ ನಿಂತುಬಿಟ್ಟಿತು. ನಮ್ಮ ಟೀಮಿನವರು ಹತ್ತು ರನ್ನುಗಳನ್ನೂ ಮಾಡದೇ ಹೋದೆವು. "ಔಟ್" ಎಂದರೆ ನಮಗೆ ಗೊತ್ತಿದ್ದುದ್ದು ಎರಡೇ- ಒಂದು ಕ್ಯಾಚು, ಮತ್ತೊಂದು ಬೋಲ್ಡು.

ಮರುದಿನ ಶಾಂತಿ, ತನ್ನ ಅಣ್ಣನಿಂದ ಕ್ರಿಕೆಟ್ ಆಟದಬಗ್ಗೆ ಮಾಹಿತಿಗಳನ್ನು ತಂದಳು. "ಎಡಗೈ‍ಯಿಂದ ಬೌಲ್ ಮಾಡ್ಬಹುದಂತೆ - ಚೆಂಡು ಬೌಂಡರಿ ದಾಟಿದಮೇಲೆ ರನ್ನುಗಳನ್ನು ಓಡುತ್ತಾ ಪೇರಿಸುವಂತಿಲ್ಲವಂತೆ- ಟೀಮು ಮಾಡುವುದೇನು ಬೇಕಿಲ್ಲವಂತೆ" ಇತ್ಯಾದಿ. ಶಾಂತಿಯ ಈ ಮಾಹಿತಿಗಳನ್ನು ಅಂಗೀಕರಿಸಿದೆವು.

ವಸಂತಳ ಎಡಗೈ ರಭಸದ ಬೌಲಿಂಗ್‍ಗೆ ಗೌರಿ ನಡುಗಿ ತತ್ತರಿಸಿ ಪಕ್ಕಕ್ಕೆ ಸರಿದಳು - ಚೆಂಡು ವಿಕೆಟನ್ನು ಉರುಳಿಸಿತು.

ಸದಾ ಕ್ರಿಕೆಟ್ ಕನಸನ್ನು ಕಾಣುತ್ತಾ ಓದನ್ನು ಪಕ್ಕಕ್ಕೆ ತಳ್ಳಿದೆವು. ತರಗತಿಗಳಲ್ಲೂ ಪಾಠಗಳಮೇಲೆ ಗಮನ ಕೊಡುತ್ತಿರಲಿಲ್ಲ. ನಮ್ಮೂರಿನ ಮತ್ತೊಂದು ದಿಕ್ಕಿನ ಶಾಲೆಯಲ್ಲಿ ಓದುತ್ತಿದ್ದ ನಮ್ಮ ಸೋದರಮಾವನ ಮಗಳು ರಮಾಳಿಗೂ ಕ್ರಿಕೆಟ್ ಹುಚ್ಚು ಹಿಡಿಸಿದೆ. "ನಮ್ಮ ಸ್ಕೂಲಿನಲ್ಲೂ ಸ್ಟಾರ್ಟ್ ಮಾಡ್ತೀವಿ. ನಮ್ಮ ಸ್ಕೂಲಿಗೂ-ನಿಮ್ಮಸ್ಕೂಲಿಗೂ ಮ್ಯಾಚ್ ಇಡಬಹುದು ಎಂದು ಭವಿಷ್ಯದ ಬಗ್ಗೆ ಹೇಳಿ ಹೋದಳು.

ನಮ್ಮ ಶಾಲೆಯ ಮುಂದೆ ಇದ್ದ ಬಾಲಕರ ಸರ್ಕಾರಿ ಪ್ರೌಢ ಶಾಲೆಯ ಹುಡುಗರು - "ನೋಡೋ ಹುಡುಗಿಯರು ಕ್ರಿಕೆಟ್ ಆಡ್ತಿದ್ದಾರೆ" ಎಂದು ಗೇಲಿ ಮಾಡಿದರು. ಮೂಲೆಮನೆ ಶಾಸ್ತ್ರಿಗಳ ಮಗ ಮಂಜು ಆ ಹುಡುಗರ ಮುಂದಾಳಾಗಿದ್ದ. ನಮ್ಮ ಗುಂಪಿನ ಗಟಾಣಿ ಗೌರಿ "ಬರೇ ಹುಡುಗರು ಆಡ್ಬೇಕು ಅಂತ ಕಾನೂನಿದೆಯೇ- ಹೋಗಿ ಹೋಗಿ" ಎಂದು ಅಬ್ಬರಿಸಿದಳು. ಹುಡುಗರು ಮರುಮಾತಾಡದೆ ಜಾಗ ಖಾಲಿಮಾಡಿದರು.

ಬ್ಯಾಟಿಂಗ್‍ನಲ್ಲಿ ಶಾಂತಿ ಪ್ರವೀಣೆಯ ಪಟ್ಟ ಪಡೆದಳು. ಎಡಗೈ ವಸಂತಳ ಬೌಲಿಂಗ್ ಬೆಸ್ಟ್ ಎಂದರು. ನಾನು ಕ್ಯಾಚ್ ಹಿಡಿಯುವುದರಲ್ಲಿ ನಿಪುಣೆ ಎಂದೆನ್ನಿಸಿಕೊಂಡೆ. ಸರೋಜಳ ಬ್ಯಾಟಿಂಗ್ ಮಹಿಮೆ ಏನೆಂದರೆ- ಬಾರಿಸಿದರೆ ಸಿಕ್ಸರ್, ಇಲ್ಲ ಮೊದಲಬಾಲಿಗೇ ಕ್ಲೀನ್ ಬೌಲ್ಡ್. ಅವಳ ಬಗ್ಗೆ ಯಾವ ಭರವಸೆಯನ್ನೂ ಇಟ್ಟುಕೊಳ್ಳಬಾರದೆಂದು ನಮ್ಮನಾಯಕಿ ಶಾಂತಿಯ ತೀರ್ಮಾನ.

ನಮ್ಮ ಕ್ರಿಕೆಟ್ ಆಟ ಸುಮಾರು ಒಂದು ತಿಂಗಳ ಕಾಲ ಸಾಗಿತು. ರಮಾಳ ಶಾಲೆಯ ವಿರುದ್ಧ ಆಡುವ ಪಂದ್ಯದ ಬಗ್ಗೆ ಆಗಾಗ್ಗೆ ಚರ್ಚಿಸುತ್ತಿದ್ದೆವು.

ಅದೊಂದು ಸಂಜೆ ಶಾಲೆ ಮುಗಿದನಂತರ ಆಟ ಆಡುತ್ತಿದ್ದೆವು. ವಸಂತಳ ಎಡಗೈ ಬೌಲಿಂಗ್, ಸರೋಜಳ ಬ್ಯಾಟಿಂಗ್ - ಸರೋಜ ಸಿಕ್ಸರ್ ಬಾರಿಸಿಯೇಬಿಟ್ಟಳು. ಎಲ್ಲರೂ "ಓ" ಎಂದು ಉದ್ಗರಿಸಿದೆವು. ಶಾಂತಿ ಚೆಂಡು ತರಲು ಜಿಂಕೆಯಂತೆ ಓಡಿದಳು. ದಾರಿಯಲ್ಲಿ ಕಲ್ಲಿತ್ತು. ನೋಡದೆ ಎಡವಿ ಬಿದ್ದಳು. ಅವಳತ್ತ ಎಲ್ಲರೂ ಧಾವಿಸಿದೆವು. ಕಾಲಿಗೆ ಪೆಟ್ಟು ಬಿದ್ದಿತ್ತು- ಕಾಲು ಅಲ್ಲಾಡಿಸಲಾಗುತ್ತಿರಲಿಲ್ಲ. ನೋವಿನಿಂದ ಜೋರಾಗಿ ಅಳತೊಡಗಿದಳು. ಸರೋಜ ಓಡಿಹೋಗಿ ಹೆಡ್‍ಮಾಸ್ಟರ್‌ಗೆ ಸುದ್ದಿ ಮುಟ್ಟಿಸಿದಳು. ಹೆಡ್‍ಮಾಸ್ಟರ್, ಪಿ.ಟಿ. ಟೀಚರ್ - ಧಾವಿಸಿ ಬಂದು ನೋಡಿ - ಮೂಳೆ ಮುರಿದಿರಬಹುದೆಂದರು. ಹತ್ತಿರವೇ ಇದ್ದ ಡಾಕ್ಟರ್ ಷಾಪಿಗೆ ರಿಕ್ಷಾದಲ್ಲಿ ಕರೆದುಕೊಂಡು ಹೊರಟರು. ಆಗಿನ ಕಾಲದಲ್ಲಿ ರಿಕ್ಷಾಗಳು ತುಂಬಾ ವಿರಳವಾಗಿದ್ದವು. ಜಟಕಾ ಗಾಡಿಗಳೇ ಜಾಸ್ತಿ ಇದ್ದವು. ನಮ್ಮ ಗುಂಪು ಹಿಂಬಾಲಿಸಿತು. ಆ ಡಾಕ್ಟರ್ ಶಾಂತಿಯನ್ನು ಪರೀಕ್ಷಿಸಿ - "ಬಲಗಾಲಿನ ಮೂಳೆ ಮುರಿದಿದೆ - ಕೂಡ್ಲೆ ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗಿ" ಎಂದು ಸಲಹೆಯನ್ನಿತ್ತರು. ಈಗಿನಹಾಗೆ ಬೀದಿಗೆರಡು ನರ್ಸಿಂಗ್ ಹೋಂಗಳಿರುತ್ತಿರಲಿಲ್ಲ. ಆಗ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸ ಬೇಕಿತ್ತು. ಶಾಂತಿಯ ಮನೆಗೆ ಸುದ್ದಿ ಮುಟ್ಟಿ - ಅವರಮನೆಯವರೆಲ್ಲರೂ ಆತರದಿಂದ ಓಡಿಬಂದರು. ಶಾಂತಿಯನ್ನು ದೊಡ್ಡಾಸ್ಪತ್ರೆಗೆ ಟ್ಯಾಕ್ಸಿಯಲ್ಲಿ ಕರೆದುಕೊಂಡು ಹೋದರು. ನಾವು ಈ ಘಟನೆಯಿಂದ ಕುಗ್ಗಿ ಹೋದೆವು.

ನಾನು ಮನೆಸೇರುವಷ್ಟರಲ್ಲಿ, ಶಾಲೆಯಲ್ಲಿ ನನಗಿಂತ ಒಂದುವರ್ಷ ಮುಂದಿದ್ದ ನೆರೆಮನೆಯ ಶಾಲಿನಿ, ನನ್ನ ತಾಯಿಗೆ ಸವಿಸ್ತಾರವಾಗಿ ಅಂದಿನ ಘಟನೆಯನ್ನು ವರದಿ ಮಾಡಿದ್ದಳು. ನನ್ನನ್ನು ಕಂಡೊಡನೆ ನನ್ನ ತಾಯಿ ಸಿಟ್ಟಿನಿಂದ "ಓದೋದು ಬಿಟ್ಟು, ಕ್ರಿಕೆಟ್ ಅಂತ ಕುಣಿದಾಡ್ತಿದ್ದೀರಲ್ಲಾ, ಏನು ಇಂಟರ್ನ್ಯಾಷನಲ್ ಮ್ಯಾಚ್‍ಗೆ ಹೊರಟಿದ್ದೀರ? ಈ ಸಲ ಟೆಸ್ಟ್‍ನಲ್ಲಿ ಎಷ್ಟು ಮಾರ್ಕ್ಸ್ ಬಂದಿದೆ ನೋಡಿದ್ಯಾ? ಆ ಶಾಂತಿ ಬೇರೆ ಬಿದ್ದು ಕಾಲು ಮುರಿದುಕೊಂಡಿದ್ದಾಳೆ. ನಾಳೆಯಿಂದ ಕ್ರಿಕೆಟ್ ಆಡೋದಿಕ್ಕೆ ಹೋದ್ರೆ ನಾನೇ ನಿನ್ನ ಕಾಲು ಮುರೀತೀನಿ" ಅಂತ ಬೈದ್ರು.

ಪ್ರತಿ ತಿಂಗಳ ಗಣಿತದ ಟೆಸ್ಟ್‍ನಲ್ಲಿ ನಾನೇ ಮೊದಲಿರುತ್ತಿದ್ದೆ. ಕ್ರಿಕೆಟ್ ಕನಸಿನಿಂದ ಪಾಠಗಳನ್ನು ಪಕ್ಕಕ್ಕೆ ತಳ್ಳಿದ್ದೆವು. ಹಾಗಿರುವಲ್ಲಿ ಟೆಸ್ಟ್‍ನಲ್ಲಿ ಉತ್ತಮ ಅಂಕಗಳನ್ನು ಪಡೆಯುವುದಾದರೂ ಹೇಗೆ? ಎಲ್ಲಾ ವಿಷಯಗಳಲ್ಲೂ ಕಡಿಮೆ ಅಂಕಗಳು ಬಂದಿದ್ದವು.

ಆ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ. ಶಾಂತಿಯ ಅಳುಮುಖವೇ ಕಣ್ಣ ಮುಂದಿತ್ತು. ಅವಳನ್ನು ನೋಡಬೇಕೆಂಬ ತವಕದಿಂದ ಮರುದಿನ ಬೆಳಿಗ್ಗೆ ಒಂದುಗಂಟೆ ಮುಂಚೆಯೇ ಶಾಲೆಗೆ ಹೋಗಲು ತಯಾರಾದೆ. "ಏನು ಇಷ್ಟು ಬೇಗ ಹೊರ‍ಡ್ತಿದೀಯ?" ಎಂದು ನನ್ನ ತಾಯಿ ಪ್ರಶ್ನಿಸಿದರು. "ಗೌರೀ ಜತೇಲಿ ಕಂಬೈಂಡ್ ಸ್ಟಡೀ ಮಾಡ್ತೀನಿ" ಎಂದು ದಿಢೀರ್ ಸುಳ್ಳು ಹೇಳಿ ಹಿಂದಿನ ಬೀದಿಯಲ್ಲೇ ಇದ್ದ ಗೌರಿ ಮನೆಗೆ ಓಡಿದೆ. ಐದು ಗಂಡು ಮಕ್ಕಳ ನಂತರ ಗೌರಿ ಹುಟ್ಟಿದುದರಿಂದ ಅವರ ಮನೆಯವರೆಲ್ಲರ ಮುದ್ದಿನ ಕಣ್ಮಣಿ ಆಗಿದ್ದಳು. ಗೌರಿ ಸಹ ನನ್ನಂತೆಯೇ ಶಾಂತಿಯನ್ನು ನೋಡಬೇಕೆಂದು ಕಾತುರದಿಂದ ಇದ್ದಳು. ಈಗಿನಂತೆ ಆಗ ಎಲ್ಲರ ಮನೆಯಲ್ಲಿ ದೂರವಾಣಿಗಳಿರಲಿಲ್ಲ. ಈಗ ಎದರು ಮನೆಯವರೊಡನೆ ವಿಚಾರ ವಿನಿಮಯವನ್ನು ಸಹ ದೂರವಾಣಿಯ ಮೂಲಕ ಮಾಡುವುದುಂಟು. ಇತ್ತೀಚೆಗಂತೂ ಯಾರ ಕೈಯಲ್ಲಿ ನೋಡಿದರೂ ಮೊಬೈಲ್‍ಫೋನು.

"ವಸಂತಾನೂ ಬರ್ತಾಳೇನೋ ನೋಡೋಣ" ಎಂದಳು ಗೌರಿ

ಶಾಂತಿಯ ಮನೆಗೆ ಹೋಗುವ ದಾರಿಯಲ್ಲಿ ವಸಂತಳ ಮನೆ. ಮನೆ ಮುಂದೆ "ಕೆ.ಟಿ.ವೇಣುಗೋಪಾಲ್, ಬಿ.ಎ.,ಬಿ.ಎಲ್., ಅಡ್ವೊಕೇಟ್" ಎಂಬ ಬೋರ್ಡು ಇದ್ದಿತಾದರೂ - ಲಾಯರ್ ಕನಕಮ್ಮನವರ ಮನೆ ಎಂದೇ ಸುತ್ತ ಮುತ್ತಲಿನವರು ಕರೆಯುತ್ತಿದ್ದುದು. "ಲಾಯರ್ ವೇಣುಗೋಪಾಲ್ ಬದಲು ಅವರ ಹೆಂಡತಿ ಕನಕಮ್ಮ ಕೋರ್ಟಿಗೆ ಹೋದರೆ ಜೋರಾಗಿ ವಾದ ಮಾಡಿ ಕೇಸನ್ನು ಗೆಲ್ತಾರೆ" ಎಂದು ಅವರ ಪರಿಚಯದವರು ಹೇಳುತ್ತಿದ್ದರು.

ವಸಂತಳ ಮನೆಯ ಬಾಗಿಲು ಮೆಲ್ಲಗೆ ತಟ್ಟಿದೆವು. ವಸಂತಳ ತಾಯಿ ಬಾಗಿಲು ತೆರೆದು- ನಮ್ಮನ್ನು ನೋಡಿದೊಡನೆ "ಒಬ್ಬಳು ಕಾಲು ಮುರ್ಕೊಂಡಿರೋದು ಸಾಲ್ದಾ. ಹೋಗ್ರೆ- ಇನ್ಮೇಲೆ ವಸಂತ ನಿಮ್ಮ ಜೊತೆ ಸೇರೋಲ್ಲ" ಎಂದು ಗದರಿಸಿ ದಡಾರೆಂದು ಬಾಗಿಲು ಮುಚ್ಚಿದರು.

"ಲಾಯರ್ ಕನಕಮ್ಮಾಂತ ಸರಿಯಾಗಿ ಹೇಳ್ತಾರೆ. ಏನು ನಾವೇನು ಶಾಂತಿ ಬಿದ್ದು ಕಾಲು ಮುರ್‍ಕೊಳ್ಲೀಅಂತ ಆಸೆ ಪಟ್ಟಿದ್ವ? ಈ ವಸಂತನ್ನ ನಮ್ಮ ಜೊತೆ ಆಟ ಆಡೂಂತ ಕರೆದಿದ್ವಾ?" ಎಂದು ಗೌರಿ ಗೊಣಗುಟ್ಟಿದಳು. ನಂತರ ನಾವಿಬ್ಬರೂ ಶಾಂತಿಯಮನೆಗೆ ಹೋದೆವು.

ನಮ್ಮಿಬ್ಬರನ್ನೂನೋಡಿ ಮಂಚದಮೇಲೆ ಕಾಲುಚಾಚಿ ಕುಳಿತಿದ್ದ ಶಾಂತಿಯ ಮುಖವರಳಿತು. ಬಲಗಾಲಿಗೆ ಪೂರಾ ಪ್ಲಾಸ್ಟರ್ ಹಾಕಿದ್ದರು. "ಒಂದು ತಿಂಗಳು ಈ ಪ್ಲಾಸ್ಟರ್ ಇರಬೇಕಂತೆ - ಒಂದು ತಿಂಗಳು ಸ್ಕೂಲಿಗೆ ಬರೋದಿಕ್ಕಾಗೋದಿಲ್ರೇ- ನೀವೇ ದಿನಾ ಮನೇಗೆ ಹೋಗೋವಾಗ ಬಂದು ಹೋಗಿ. ಬರೆದಿರೋ ನೋಟ್ಸ್ ಕೊಡಿ. ಬರೆದುಕೊಳ್ತೀನಿ" ಎಂದು ಮೃದುವಾಗಿ ಕೇಳಿದಳು. ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದವಳು. ಅವಳ ಅಸಹಾಯಕ ಸ್ಥಿತಿಯನ್ನು ಕಂಡು ನಮಗೆ ಅಳು ಬಂತು.

"ಯಾಕಳ್ತೀರಿ, ನಂಗೇನೂ ಆಗಿಲ್ಲ. ಚಿಕ್ಕವಯಸ್ಸಿನವರಿಗೆ ಮೂಳೆ ಮುರಿದರೆ ಬೇಗ ಕೂಡುತ್ತಂತೆ" ಎಂದು ನಮಗೇ ಸಮಾಧಾನ ಹೇಳಿದಳು.

ಅಲ್ಲೇ ಇದ್ದ ಅವಳ ತಾಯಿ "ಸಧ್ಯ ನಮ್ಮ ಪುಣ್ಯ, ಕಾಲಿನ ಮೂಳೆ ಮುರಿದಿದೆ. ತಲೆಗೇನಾದರೂ ಪೆಟ್ಟು ಬಿದ್ದಿದ್ದರೆ- ಗತಿ ಏನು? ಓಡುವಾಗ ಕಲ್ಲು-ಮುಳ್ಳುಗಳ ಮೇಲೆ ಗಮನ ಕೊಡಬೇಕು. ಒಂದು ತಿಂಗಳು ಅವಳು ಸ್ಕೂಲಿಗೆ ಬರೋದಿಕ್ಕೆ ಆಗೋಲ್ಲ. ಅವಳಿಗೂ ಬೇಜಾರಾಗುತ್ತೆ. ನೀವು ಆಗಾಗ ಬರ್ತಿರಿ" ಎಂದರು. ಶಾಂತಿಯ ಅಮ್ಮ ಏನಂತಾರೋ ಅನ್ನುವ ಅಳುಕು ನಮಗಿತ್ತು. ಆದರೆ ಅವರು ನಮ್ಮನ್ನು ಮೊದಲಿನಂತೆಯೇ ಪ್ರೀತಿಯಿಂದ ಮಾತನಾಡಿಸಿದರು.

ನಮ್ಮ ಕ್ರಿಕೆಟ್ ನಾಯಕಿ ಹಾಗೂ ಸ್ಪೂರ್ತಿ ಶಾಂತಿಯ ಗೈರು ಹಾಜರಿಯಿಂದ ಉತ್ಸಾಹ ತಣ್ಣಗಾಯಿತು. ಪ್ರತಿ ದಿನ ಶಾಲೆ ಮುಗಿದನಂತರ ಮನೆಗೆ ಹಿಂದಿರುಗುವಾಗ ಶಾಂತಿಯ ಮನೆಗೊಮ್ಮೆ ಭೇಟಿ ಮಾಡಿ, ಅಂದಿನ ನೋಟ್ಸನ್ನು ಅವಳಿಗಿತ್ತು - ಅವಳತಾಯಿ ಕೊಡುತ್ತಿದ್ದ ತಿಂಡಿಯನ್ನು ಭುಂಜಿಸಿ ಮನೆಗೆ ಹಿಂತಿರುಗುತ್ತಿದ್ದೆವು. ಪರೀಕ್ಷೆ ಹತ್ತಿರ ಬಂದುದರಿಂದ "ಕ್ರಿಕೆಟ್"ಗೆ ವಿದಾಯ ಹೇಳಿ ಪರೀಕ್ಷೆಯ ತಯಾರಿಯಲ್ಲಿ ತಲ್ಲೀನರಾದೆವು.

ಪರೀಕ್ಷೆ ಮುಗಿದು ಬೇಸಿಗೆ ರಜ ಬಂತು. ಗುಂಪು ಚೆದುರಿತು. ಪಿ.ಟಿ. ಟೀಚರ್ ಮನೆ - ನಮ್ಮಮನೆ ಸಮೀಪವೇ ಇತ್ತು. ಅವರಮನೆ ಮುಂದೆ ಟೀಚರ್‍ಅವರ ಗಂಡು ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಆ ಬ್ಯಾಟು, ವಿಕೆಟ್‍ಗಳು ನಮ್ಮಕ್ರಿಕೆಟ್ ಆಟದಲ್ಲಿ ಉಪಯೋಗಿಸಿದ್ದೇ ಇರಬೇಕೆಂದು ನನ್ನ ಅನುಮಾನ.

ನನ್ನ ತಂದೆಗೆ ಬೇರೆ ಊರಿಗೆ ವರ್ಗವಾದುದರಿಂದ - ನನ್ನ ಓದು ಬೇರೆ ಊರಿನ ಶಾಲೆಯಲ್ಲಿ ಮುಂದುವರೆಯಿತು. ಎರಡು ವರ್ಷ-ಮೂರು ವರ್ಷಕ್ಕೊಮ್ಮೆ ನನ್ನ ತಂದೆಗೆ ವರ್ಗವಾಗುತ್ತಿತ್ತು. ಕರ್ನಾಟಕದಲ್ಲಿ ಅನೇಕ ಊರುಗಳನ್ನು ಸುತ್ತಿದೆವು. ವರ್ಷಗಳು ಉರುಳಿದವು. ಓದು, ವೃತ್ತಿ, ಮದುವೆ, ಸಂಸಾರ, ಮಕ್ಕಳು ಇವುಗಳಲ್ಲಿ ಮುಳುಗಿದೆ. ಮಕ್ಕಳ ಓದು- ಅವರ ಭವಿಷ್ಯದ ಕಡೆ ಹೆಚ್ಚು ಆಸಕ್ತಿ ವಹಿಸಿದೆ.

ಬಂಧುಗಳ ಮದುವೆಯ ಸಮಾರಂಭದಲ್ಲಿ - ಯಾರೋ ಬೆನ್ನು ತಟ್ಟಿ "ಹಾಯ್- ಎಷ್ಟು ವರ್ಷಗಳಾಯ್ತೇ-ನಿನ್ನನ್ನ ನೋಡಿ?" ಎಂದು ಅತ್ಯಂತ ಹರ್ಷದಿಂದ ಉದ್ಗರಿಸಿದರು. ತಕ್ಷಣ ಯಾರೆಂದು ಹೊಳೆಯಲಿಲ್ಲ. "ಹಾಯ್ ಶಾಂತಿ!" ಎಂದು ಮಿಗಿಲಾದ ಸಂತಸದಿಂದ ಅವಳನ್ನು ಅಪ್ಪಿಕೊಂಡೆ. ಅವಳು ಪೂರಾ ಬದಲಾಯಿಸಿದ್ದಳು. ಉದ್ದನೆ ಜಡೆ ಮಾಯವಾಗಿ "ಶೌಲ್ಡರ್ ಕಟ್' ಬಂದಿತ್ತು. ಅವಳ ಮಕ್ಕಳಿಬ್ಬರೂ ಸಾಫ್ಟ್‍ವೇರ್ ಎಂಜಿನಿಯರ್ಸ್ ಎಂದೂ - ಅವರಿಬ್ಬರೂ ಅಮೆರಿಕಾದಲ್ಲಿದ್ದಾರೆಂದೂ, ತಾನು ಮೂರು ಮೊಮ್ಮಕ್ಕಳ ಅಜ್ಜಿ ಎಂದೂ ಹೆಮ್ಮೆಯಿಂದ ಹೇಳಿಕೊಂಡಳು. ಗೌರಿ, ಮೂಲೆ ಮನೆ ಶಾಸ್ತ್ರಿಗಳ ಮಗ ಮಂಜುವನ್ನು ಮದ್ವೆಯಾದ್ಲು- ಅವಳಿಗೆ ಒಬ್ಬ ಮಗ, ಒಬ್ಳು ಮಗಳು- ಆ ಮಂಜು ಈಗ ದೊಡ್ಡ ಪೊಲೀಸ್ ಅಧಿಕಾರಿ. "ಸೋಮಾರಿ ಸರೋಜ" ಅಂತ ನಾವೆಲ್ಲಾ ಚುಡಾಯಿಸ್ತಿದ್ವಲ್ಲ- ಅವಳು ಈಗ ಪ್ರಸಿದ್ಧ ಗೈನಕಾಲಜಿಸ್ಟ್- ಅವಳಪತಿ ದೊಡ್ಡ ಸರ್ಜನ್- ಅವರದೊಂದು ದೊಡ್ಡ ನರ್ಸಿಂಗ್ ಹೋಮ್ ಇದೆ - ಅವರ ಮಗಳು, ಅಳಿಯ ಡಾಕ್ಟ್ರುಗಳು - ಮಗ ಮತ್ತು ಸೊಸೆ ಸಹ ಡಾಕ್ಟ್ರುಗಳು. ವಸಂತಳ ಗಂಡ ಎಂಜಿನಿಯರ್. ಮದುವೆಯ ನಂತರ ಅಮೆರಿಕಾಗೆ ಹೋದವರು ಅಲ್ಲೇ ಸೆಟ್ಲಾಗಿದ್ದಾರೆ ಎಂದು ನಮ್ಮ ಹಳೇ ಸ್ನೇಹಿತೆಯರ ವಿವರಗಳನ್ನು ತಿಳಿಸಿದಳು. ಒಂದೇ ಊರಿನಲ್ಲಿದ್ದ ಶಾಂತಿಗೆ ಎಲ್ಲರ ಸಂಪರ್ಕವಿತ್ತು.

"ಬಾ ನಮ್ಮವರ ಪರಿಚಯ ಮಾಡಿಸ್ತೀನಿ" ಅಂತ ಎಳ್ಕೊಂಡು ಹೋಗಿ- "ಇವರೇ ನಮ್ಮ ಯಜಮಾನ್ರು" ಎಂದು ಪರಿಚಯ ಮಾಡಿಸಿದಳು.

ಎಲ್ಲೋ ನೋಡಿದ್ದೇನೆ, ಚಿರ ಪರಿಚಿತ ಮುಖ ಅಂತಂದುಕೊಂಡು " ಇವರನ್ನು ನಾನು ನೋಡಿದ್ದೀನಿ -ಅಂತನ್ನಿಸುತ್ತೆ" ಎಂದೆ.

"ಟಿ.ವಿ. ಯಲ್ಲಿ ನೋಡಿರ್‍ತೀಯ. ಇವರು ಕ್ರಿಕೆಟ್ ಪ್ಲೇಯರ್ ಆಗಿದ್ರು - ಈಗ ಕ್ರಿಕೆಟ್ ಟೆಸ್ಟ್‍ಗೆಲ್ಲಾ ಅಂಪೈರ್ ಆಗಿರ್ತಾರೆ. ಆಗಾಗ್ಗೆ ಕಾಮೆಂಟ್ರೀನೂ ಕೊಡ್ತಾರೆ" ಅಂತ ಅವಳು ಅಂದೊಡನೆ ಅವರು ಯಾರೆಂದು ಮಿಂಚಿನಂತೆ ಮೆದಳಿನಲ್ಲಿ ಸುಳಿಯಿತು. ನಮ್ಮ ಕ್ರಿಕೆಟ್ ಟೀಮಿನ ನಾಯಕಿ ಹಾಗೂ ಅಂಪೈರ್ ಆಗಿದ್ದ ಶಾಂತಿ ಕ್ರಿಕೆಟ್ ಆಟಗಾರನನ್ನೇ ಕೈ ಹಿಡಿದಿದ್ದಳು.

ನನ್ನ ಹಿರಿ ಮಗ ರೋಶನ್ - ಶಾಲಾ ಕಾಲೇಜಿನಲ್ಲಿ ಒಳ್ಳೆ ಕ್ರಿಕೆಟ್ ಪಟುವಾಗಿದ್ದ. ಶಾಲಾಕಾಲೇಜಿನ ಪರ ಸ್ಪರ್ಧಿಸಿದ್ದ. ಕಾಲೇಜು ಮುಗಿದ ನಂತರ ಕೆಲಸದಮೇಲೆ ಅಮೆರಿಕಾಕ್ಕೆ ತೆರಳಿದ - ಕ್ರಿಕೆಟ್ ದೂರವಾಯಿತು. ಕಿರಿ ಮಗ ಶ್ಯಾಮ್ ಪ್ರಸಿದ್ಧ ಕ್ರಿಕೆಟ್ ಪಟುವಾಗುತ್ತಾನೆಂದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಾಕ್ಕೆ ತೆರಳಿದ. ಕ್ರಿಕೆಟ್ ಆಡುವ ಅಭ್ಯಾಸ ತಪ್ಪಿ ಹೋಯಿತು. ಇವರಂತೆ ಅನೇಕರಿರಬಹುದು

ಟಿ.ವಿ. ಯ ಮುಂದೆ ಕುಳಿತು ಇಂದಿನ ಕ್ರಿಕೆಟನ್ನು ನೋಡುತ್ತಾ, ನನ್ನವರ ವಿಮರ್ಶೆಯನ್ನು ಕೇಳುವಾಗ, ಹಿಂದಿನ ಕ್ರಿಕೆಟ್ಟನ್ನು ಆಗಾಗ್ಗೆ ಮೆಲಕು ಹಾಕುತ್ತೇನೆ. ಅಂದಿನ ಆ ಬಾಲ್ಯದ ಸವಿ ನೆನಪುಗಳನ್ನು ಮೆಲಕು ಹಾಕುವುದೇ ಜೀವನದ ಒಂದು ಚೈತನ್ಯ!