Sarayu's writings in Kannada

Name:
Location: Bangalore, Karnataka, India

Tuesday, October 03, 2006

ಶ್ರೀ ವರಲಂಚದೇವರ ವ್ರತ

ಶ್ರೀ ವರಲಂಚದೇವರ ಈ ವ್ರತವನ್ನು ಸದ್ಭಕ್ತಿ ಹಾಗೂ ಸವಿನಯನದಿಂದ ನಡೆಸಿದ್ದಲ್ಲಿ ಆ ದೇವರ ಅನುಗ್ರಹಕ್ಕೆ ಪಾತ್ರರಾಗುವುದರಲ್ಲಿ ಸಂಶಯವಿಲ್ಲ. ಈ ವ್ರತವನ್ನು ಸ್ವತಃ ತಾವೇ ನಡೆಸಬಹುದು, ಇಲ್ಲ ಮಧ್ಯವರ್ತಿಗಳ ಮೂಲಕವೂ ಮಾಡಬಹುದು.

ಈ ವ್ರತವನ್ನು ವರ್ಷದ ೩೬೫ ದಿನಗಳಲ್ಲೂ ಮಾಡಬಹುದು. ಆದರೆ ಶನಿವಾರ, ರವಿವಾರ ಮತ್ತು ಇತರೆ ಸರ್ಕಾರಿ ರಜಾದಿನಗಳಲ್ಲಿ ಮಾಡಿದರೆ ಫಲ ಸಿದ್ಧಿ ಗ್ಯಾರಂಟಿ ಇರುವುದಿಲ್ಲ. ಈ ವ್ರತಕ್ಕೆ ಕಾಲ ನಿಯಮಗಳು - ಅಂದರೆ ಪ್ರಾತಃಕಾಲ, ಮಧ್ಯಾಹ್ನ, ಸಾಯಂಕಾಲ, ರಾತ್ರಿ ಎಂಬುವುದಿರುವುದಿಲ್ಲ. ಆ ದೇವರ ಕೃಪಾಕಟಾಕ್ಷ ಯಾವ ಸಮಯದಲ್ಲಿ ಅನುಗ್ರಹವಾಗುತ್ತದೆಂದು ಮರಿದೇವರುಗಳ ಮೂಲಕ ಅರಿತು ನಡೆಸತಕ್ಕದ್ದು.

ಹತ್ತು ಇಪ್ಪತ್ತರ ಒಂದಷ್ಟು ನೋಟುಗಳನ್ನು, ಐವತ್ತು, ನೂರು, ಐನೂರು, ಸಾವಿರದ ನೋಟುಗಳನ್ನು ಒಂದು ಕೈಚೀಲದಲ್ಲಿಯೂ- ಬ್ರೀಫ್ ಕೇಸಿನಲ್ಲಿ ಬೇರೆ ಬೇರೆಯಾಗಿ ಇಟ್ಟುಕೊಳ್ಳತಕ್ಕದ್ದು. ಇದರೊಟ್ಟಿಗೆ ಖಾಲಿ ಕವರುಗಳನ್ನು ಒಂದುಕಡೆ ಸುಲಭವಾಗಿ ಸಿಗುವಂತೆ ಇರಿಸಿಕೊಳ್ಳತಕ್ಕದ್ದು.

ಪೂಜಾ ವಿಧಾನವು ಯಾವರೀತಿಯ ಫಲ ಸಿದ್ಧಿಗಾಗಿ, ಹಾಗೂ ಎಷ್ಟು ದಿನಗಳಲ್ಲಿ ಫಲಪ್ರದವಾಗಬೇಕೆಂಬುದರಮೇಲೆ ಅವಲಂಬಿಸಿರುತ್ತದೆ.

ಪೂಜಾ ಸಾಮಗ್ರಿಗಳು ಧನರೂಪದಲ್ಲೇ ಇರಬೇಕೆಂಬ ನಿಯಮವಿಲ್ಲ. ನಗಗಳ, ನಿವೇಶನ ಪತ್ರಗಳ, ವಾಹನಗಳ ಇಲ್ಲ ಲಂಚದೇವರ ಯಾವುದೇ ಇಷ್ಟಾರ್ಥರೂಪದಲ್ಲಿ ಬೇಕಾದರೂ ಆಗಬಹುದು.

ಮನದಲ್ಲೇ, ಆಗಬೇಕಾದ ಕಾರ್ಯವನ್ನು ಯಾವ ರೀತಿ ಪೂರ್ಣಗೊಳಿಸ ಬಹುದೆಂದು ಆಲೋಚಿಸುವುದು. ದ್ವಾರಪಾಲಕ ಪ್ರೀತ್ಯರ್ಥಂ- ಎಂದು ಮನದಲ್ಲಿ ಧ್ಯಾನಿಸುತ್ತಾ, ಹತ್ತು ಇಪ್ಪತ್ತರ ನೋಟುಗಳನ್ನು ಎಡ ಜೇಬಿನಲ್ಲಿ ಕಾಣುವಂತೆ ಇಟ್ಟುಕೊಳ್ಳತಕ್ಕದ್ದು. ಎಡ ಜೇಬನ್ನು ಸವರುತ್ತಾ ದ್ವಾರಪಾಲಕನನ್ನು ಸಮೀಪಿಸಿ ನಗುಮುಖದಿಂದ ಮಾತನಾಡಿಸುವುದು. ದ್ವಾರಪಾಲಕನು ನಿಮ್ಮ ಜೇಬನ್ನೇ ನೋಡುತ್ತಾ ನಮಸ್ಕರಿಸಿದೊಡನೆ ಎರಡು ಹತ್ತು ಅಥವ ಒಂದು ಇಪ್ಪತ್ತು ನೋಟನ್ನು ಕಿಸೆಯಿಂದ ತೆಗೆದು ಆತನ ಕೈಯಲ್ಲಿ ಸಮರ್ಪಿಸಿ "ದ್ವಾರಪಾಲಕ ಪೂಜಾಂ ಸಮರ್ಪಯಾಮಿ"ಎಂದು ಮನಸ್ಸಿನಲ್ಲೇ ಕೈ ಮುಗಿದು - ಮರಿದೇವರ ಯಾ ಉಪದೇವರ ಪೂಜೆಗೆ ಮುನ್ನಡೆಯುವುದು.

ಮರಿದೇವರುಗಳಿಗೆ ನಮ್ರತೆಯಿಂದ ವಂದನೆಯನ್ನು ಸಲ್ಲಿಸಿ ಕೈಚೀಲ ಯಾ ಬ್ರೀಫ್ಕೇಸು ಕಾಣುವಂತೆ ನಿಂತುಕೊಳತಕ್ಕದ್ದು. ಮರಿದೇವರುಗಳು ಆಸನವನ್ನು ತೋರಿಸುತ್ತಾರೆ. ಮನಸ್ಸಿನಲ್ಲಿ ಏನೇಭಾವನೆಗಳಿದ್ದರೂ ನಗು ಮುಖದಿಂದ ಕುಳಿತುಕೊಂಡು ಮೊದಲೇ ಹೇಳಿರುವಂತೆ ಕಾರ್ಯ ಸಿದ್ಧಿಗೆ ತಕ್ಕಂತೆ ಖಾಲಿ ಲಕೋಟೆಯಲ್ಲಿ ಶಕ್ತಾನುಸಾರವಾಗಿ ಸಮರ್ಪಿಸಿ "ಇತಿ ಉಪದೇವ ಪೂಜಾಂ ಸಮರ್ಪಯಾಮಿ"ಎಂದು ಮನಸ್ಸಿನಲ್ಲೇ ಹೇಳಿಕೊಂಡು - ಮರಿ ದೇವರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗುವುದು.

ಇತಿ ಉಪದೇವರುಗಳ - ಮರಿದೇವರುಗಳ ಪೂಜಾ ವಿಧಾನಂ ಸಮಾಪ್ತಂ ಎಂದು ಹೇಳಿಕೊಂಡು - ಇತಿ ಮೂಲ ಲಂಚದೇವರ ಪೂಜಾ ಆರಂಭಂ ಎಂದು ಮನಸ್ಸಿನಲ್ಲೇ ಪ್ರಾರ್ಥನೆ ಮಾಡಿಕೊಳ್ಳಬೇಕು.

ಪೂಜಾ ವಿಧಾನವು ಯಾವ ಕಾರ್ಯಕ್ಕಾಗಿ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಮುಖ್ಯ ದೇವರ ಅನುಗ್ರಹಕ್ಕಾಗಿ ಅಪಾರ ಭಕ್ತ ವೃಂದವೇ ನೆರೆದಿರಬಹುದು. ಆಸನ ಖಾಲಿ ಇದ್ದರೆ ಕುಳಿತುಕೊಂಡು ಮನಸ್ಸಿನಲ್ಲೇ - ದೇವರನ್ನು ನೆನೆಸಿಕೊಳ್ಳುತ್ತಾ ಶಾಂತರೀತಿಯಲ್ಲಿ ಕುಳಿತಿರಬೇಕು. ಆಸನ ಇಲ್ಲವಾದಲ್ಲಿ ನಿಂತುಕೊಂಡೇ ಪ್ರಾರ್ಥನೆ ಮಾಡಬೇಕಾಗುತ್ತದೆ. ಪ್ರಾರ್ಥನಾ ಪೂಜೆ ನಿಮಿಷಗಳಿರಬಹುದು, ಗಂಟೆಗಳಾಗಬಹುದು - ಸಹನೆ ಅತ್ಯಗತ್ಯ. ಪೂಜಾ ಫಲವು ಮುಖ್ಯ ದೇವರ ಮೂಡ್ ಮತ್ತು ಪೂಜಾ ವಿಧಾನವನ್ನು ಅವಲಂಬಿಸಿರುತ್ತದೆ. ಪ್ರಥಮ ಪೂಜೆಯಲ್ಲಿ ಫಲ ಸಿಗದಿದ್ದಲ್ಲಿ - ಮರಳಿಯತ್ನವ ಮಾಡಬೇಕು. ಪೂಜೆಯನ್ನು ಪ್ರತಿವಾರ ಇಲ್ಲ ಮಾಸಕ್ಕೊಮ್ಮೆ - ಭಕ್ತಿ ನಮ್ರತೆಯಿಂದ ನಡೆಸಿದ್ದಲ್ಲಿ ಫಲಪ್ರದವಾಗಿ ಸುಖ ಸಂತೋಷದಿಂದ ಇರುವುದರಲ್ಲಿ ಸಂಶಯವಿಲ್ಲ.

ಶ್ರೀ ಲಂಚದೇವರ ವ್ರತ - ಕಥಾ ಪ್ರಸಂಗ.

ಎಲೈ ಕಣ್ವಋಷಿಯ ಸಾಕು ಮಗಳೇ - ಈ ರೀತಿ ಪೂಜೆಯಿಂದ ಫಲ ದೊರೆತ ದೃಷ್ಟಾಂತಗಳಿವೆಯೇ ಎಂದು ಸತ್ಯಪ್ರಿಯಧರ್ಮಪತಿ ಕೇಳಲಾಗಿ -
"ಸತ್ಯಪ್ರಿಯ ಧರ್ಮಪತಿಗಳೇ - ತಾವು ಯಾವಾಗಲೂ ನೇರವಾಗಿ ಯಾವುದನ್ನೂ ಒಪ್ಪುವುದಿಲ್ಲ. ಸಾಕ್ಷಾಧಾರಗಳು ಇವೆಯೇ- ಎಂದು ಪ್ರಶ್ನಿಸುತ್ತೀರಿ. ನಿಮ್ಮ ಅನುಮಾನವನ್ನು ಹೋಗಲಾಡಿಸಲು ಹೇಳುತ್ತೇನೆ - ಕೇಳುವಂತವರಾಗಿ. ಸಂಕಟದಿಂದ ಪರಿತಪಿಸುತ್ತಿದ್ದ ಆರಕ್ಷಕ ಇಲಾಖೆಯ ಅಧಿಕಾರಿಯ ಕಥೆಯನ್ನು ಹೇಳುತ್ತೇನೆ - ಮನಸ್ಸಿಟ್ಟು ಕೇಳೀ. ಮಧ್ಯೆ-ಮಧ್ಯೆ ಪ್ರಶ್ನೆಗಳನ್ನು ಹಾಕಿ, ಕಥೆಗೆ ಅಡ್ಡಿ ಮಾಡಬೇಡಿ.
ಧರ್ಮರಕ್ಷಕ - ದುಷ್ಟಶಿಕ್ಷಕ ಎಂದೇ ಪ್ರಸಿದ್ಧರಾಗಿದ್ದರು - ಆರಕ್ಷಕ ಇಲಾಖೆಯ ಅಧಿಕಾರಿ ಆನಂದಮೂರ್ತಿಗಳು. ಕೊಲೆ, ಸುಲಿಗೆ ಗೂಂಡಾಗಿರಿಗಳಿಗೆ ಹೆಸರುವಾಸಿಯಾಗಿರುವ ಪ್ರದೇಶಗಳಿಗೆ ಸರ್ಕಾರ ಅವರನ್ನು ವರ್ಗಾವಣೆ ಮಾಡುತ್ತಿತ್ತು. ಆನಂದಮೂರ್ತಿಯವರು ಆರಕ್ಷಕ ಅಧಿಕಾರಿ ಎಂದು ಭಯಪಡದೆ, ಅಲ್ಲಿನ ಪ್ರಜೆಗಳು ಗುಂಪು ಗುಂಪಾಗಿ ಬಂದು - ತಮ್ಮ ಊರಿನಲ್ಲಿ ನಡೆಯುವ ಕೊಲೆ, ಸುಲಿಗೆ, ಗೂಂಡಾಗಿರಿಗಳನ್ನು ಮನಬಿಚ್ಚಿ ಹೇಳಿಕೊಂಡು ಗೊಳೋ ಎಂದು ಕಣ್ಣೀರು ಸುರಿಸುತ್ತಿರಲಾಗಿ - ನಾನಿರುವುದೆ ನಿಮಗಾಗಿ, ನೀವಿರುವುದೆ ನನಗಾಗಿ, ಕಣ್ಣೀರೇಕೆ - ಬಿಸಿಉಸಿರೇಕೆ ಎಂದು ಹಾಡಿದ ಅಣ್ಣ ಡಾ||ರಾಜ್ ಕುಮಾರ್ ರವರಂತೆ - ಆನಂದಮೂರ್ತಿಯವರು -ಪ್ರಜೆಗಳನ್ನು ಸಂತೈಸಿ ಕಳುಹಿಸಿ, ಕೊಲೆ, ಸುಲಿಗೆ, ಗೂಂಡಾಗಿರಿ ಮಾಡುತ್ತಿದ್ದ ಚಂಡ-ಪ್ರಚಂಡರನ್ನು ತಾವೇ ಖುದ್ದಾಗಿ ಹಿಡಿದು ಸತ್ಯ ಧರ್ಮ ಅಹಿಂಸೆಗಳ ಆದರ್ಶವನ್ನು ಅವರಿಗೆ ಬೋಧಿಸಿ ಅಧರ್ಮದಿಂದ ಧರ್ಮದ ಕಡೆಗೆ ಪರಿವರ್ತಿಸುತ್ತಿರಲಾಗಿ - ಆನಂದಮೂರ್ತಿಯವರು ಕಾರ್ಯ ನಿರ್ವಹಿಸುತ್ತಿದ್ದ ಪ್ರದೇಶದಲ್ಲಿ ಕಳ್ಳತನ, ಸುಲಿಗೆ, ದರೋಡೆ ಕೊಲೆಗಳೇ ಇರುತ್ತಿರಲಿಲ್ಲ. ಪೇದೆ ಪಾಪಯ್ಯ, ಹಾಗೂ ಬೇರೆ ಅಧೀನ ಅಧಿಕಾರಿಗಳು, ಆನಂದಮೂರ್ತಿಗಳ ಈ ಕಾರ್ಯ ವೈಖರಿಯಿಂದ - ಮಾಮೂಲಿಯಿಂದ ವಂಚಿತರಾದವೆಂದು ಗೊಣಗುಟ್ಟುತ್ತಿದ್ದರು. ಒಮ್ಮೆ ಇಂತಿರಲಾಗಿ - ಆನಂದಮೂರ್ತಿಯವರ ಮೇಲಧಿಕಾರಿಗಳು, ಆರಕ್ಷಕ ಠಾಣೆಗೆ ತನಿಖೆಗೆ ಬರಲಾಗಿ - ಆ ಪ್ರದೇಶದಲ್ಲಿ ಯಾವುದೇ ಅಪರಾಧಗಳಿಲ್ಲದೆ ಜನರು ಸುಖ ಸಂತೋಷದಿಂದ ಇರುವುದನ್ನು ನೋಡಿ ಅಚ್ಚರಿಪಟ್ಟರು. ಠಾಣೆಯ ಫಲಕದಲ್ಲಿ ಯಾವುದೇ ಅಪರಾಧಗಳ ಅಂಕಿಅಂಶಗಳಿರಲಿಲ್ಲ. ಧರ್ಮಾರಕ್ಷಕ ಆನಂದಮೂರ್ತಿಯವರ ಬಗ್ಗೆ ಮೆಚ್ಚುಗೆ ಸೂಚಿಸಿದರು ಆ ಹಿರಿಯ ಅಧಿಕಾರಿಗಳು.

ಇಂತಿರಲಾಗಿ - ಆ ಹಿರಿಯ ಅಧಿಕಾರಿಗಳು ತಂಗಿದ್ದ ಸರ್ಕಾರಿ ಅತಿಥಿ ಗೃಹಕ್ಕೆ - ರಾತ್ರಿ ಹತ್ತರ ನಂತರ ಪೇದೆ ಪಾಪಯ್ಯ ಹಾಗೂ ಇತರೆ ಅಧೀನ ಅಧಿಕಾರಿಗಳು ತೆರಳಿ ತಮ್ಮ ಅಳಲನ್ನು ತೋಡಿಕೊಂಡರು. "ಆನಂದಮೂರ್ತಿಗಳು -ಬಂದಾಗಿನಿಂದಲೂ ಒಂದು ಚಿಕ್ಕ ಕಳ್ಳತನವೂ ಈ ಪ್ರದೇಶದಲ್ಲಿ ನಡೆದಿಲ್ಲ, ತಮ್ಮನ್ನು ಕಂಡರೆ ಅಂಜಿ ಓಡಬೇಕು - ಹಾಗಿರುವಲ್ಲಿ ಇಲ್ಲಿ ಅಂತಿಲ್ಲ, ತಮ್ಮ ಸ್ಥಾನಕ್ಕೆ ಬೆಲೆ ಇಲ್ಲವಾಗಿದೆ - ಇಲಾಖೆಗೆ ಅವಮಾನವಾಗಿದೆ" ಇಂತೆಂದು ದೊಡ್ಡ ಪಟ್ಟಿಯನ್ನೇ ಅವರ ಮುಂದಿಟ್ಟರು. ಉತ್ತಮ ಉಡುಗೊರೆಯನ್ನಿತ್ತು ಸನ್ಮಾನಿಸಿದರು. ಅವರ ಅಳಲನ್ನು ಕೇಳಿ, ಅವರಿತ್ತ ಉಡುಗೊರೆಯನ್ನು ಸ್ವೀಕರಿಸಿ - ಸಂತೃಪ್ತರಾದ ಆ ಹಿರಿಯ ಅಧಿಕಾರಿಗಳು "ಚಿಂತಿಸ ಬೇಡಿ - ಸಧ್ಯದಲ್ಲೇ ತಮ್ಮೆಲ್ಲರ ಸಂಕಟಕ್ಕೆ ಪರಿಹಾರ ನೀಡುವೆ" ಎಂದು ಅಭಯವನ್ನಿತ್ತರು.

ಆನಂದಮೂರ್ತಿಯವರ ದಕ್ಷತೆಗೆ ಬೆನ್ನು ತಟ್ಟಿದ್ದ ಆ ಹಿರಿಯ ಅಧಿಕಾರಿಗಳು, ಒಂದು ವಾರದಲ್ಲೇ ಮೂರ್ತಿಯವರನ್ನು ರಾಜ್ಯದ ಯಾವುದೋ ಮೂಲೆಯಲ್ಲಿರುವ ಕಂಡುಕೇಳದ ಜಾಗಕ್ಕೆ ಎತ್ತಂಗಡಿ ಮಾಡಿಬಿಟ್ಟರು.

ಪೇದೆ ಪಾಪಯ್ಯನ ಹೆಂಡತಿ ಪದ್ಮಾವತಿ - ಆನಂದಮೂರ್ತಿಯವರ ಮನೆಗೆ ಬಂದು "ಅಮ್ಮಾವ್ರೇ ಹೀಗಾಗ್ಬಾರದಿತ್ತು. ಸಾಹೇಬ್ರು ಬೋ ಒಳ್ಳೇವ್ರು- ಸಾಹೇಬ್ರನ್ನ ಅದ್ಯಾವ್ದೋ ಊರ್ಗೆ ವರ್ಗ ಮಾಡವ್ರಂತೆ - ಅಂಗಂತ ನಮ್ಮ ಯಜಮಾನ್ರು ಏಳುದ್ರು" - ಮನಸ್ಸಿನ ಆನಂದವನ್ನು ಮುಚ್ಚಿಟ್ಟು ಮೊಸಳೆ ಕಣ್ಣೇರನ್ನು ಸುರಿಸಿದಳು.

ಪದ್ಮಾವತಿಯ ಕತ್ತಿನಲ್ಲಿ ಝಗಿ-ಝಗಿಸುತ್ತಿದ್ದ ದಪ್ಪನೆಯ ಚಿನ್ನದ ಸರ, ಕೈಯ್ಯಲ್ಲಿದ್ದ ಭಾರಿ ಗಾತ್ರದ ಚಿನ್ನದ ಬಳೆಗಳನ್ನು ನೋಡಿ ಆನಂದಮೂರ್ತಿಯವರ ಸತಿ ಸರೋಜಿನಿಗೆ ಸಖತ್ ಸಿಟ್ಟು ಬಂತು.

ಪೇದೆ ಪಾಪಯ್ಯ ಎಲ್ಲಿ - ಹಿರಿಯ ಅಧಿಕಾರಿಗಳಾದ ಆನಂದಮೂರ್ತಿಗಳೆಲ್ಲಿ? ಅಂತಿರುವಲ್ಲಿ ಪಾಪಯ್ಯನ ಪತ್ನಿ ಪದ್ಮಾವತಿಯ ಬಳಿ ಎಷ್ಟೊಂದು ಆಭರಣಗಳಿವೆ. ಹಿರಿಯ ಅಧಿಕಾರಿ ಆನಂದಮೂರ್ತಿಗಳ ಸತಿ ಎಂದೆನ್ನಿಸಿಕೊಂಡಿರುವ ತನ್ನ ಬಳಿ - ನೆಟ್ಟಗೆ ಒಂದೆರಡೆಳೆ ಚಿನ್ನದ ಸರವಿಲ್ಲ, ಚಿನ್ನದ ಬಳೆಗಳಿಲ್ಲ. ಆರಕ್ಷಕ ಹಿರಿಯ ಗುಮಾಸ್ತನ ಮಗ ಜುಮ್ಮೆಂದು ಬೈಕ್‍ನಲ್ಲಿ ಸುತ್ತಾಡುತ್ತಾನೆ. ತಮ್ಮ ಮಗ ಕಾಲೇಜಿಗೆ ಸೈಕಲ್ಲಿನಲ್ಲೇ ಹೋಗುತ್ತಾನೆ. ಇದು ಯಾವ ನ್ಯಾಯ - ಈ ದಿನ ಅವರು ಮನೆಗೆ ಬರಲಿ - ಸುಮ್ಮನಿರುವುದಿಲ್ಲ- ಎಂದು ತೀರ್ಮಾನಿಸಿದಳು.

ಭುಗಿಲೆದ್ದ ಸಿಟ್ಟನ್ನು ತೋರ್ಪಡಿಸದೆ -"ಸರ್ಕಾರಿ ಕೆಲಸದಲ್ಲಿದ್ದವರಿಗೆ - ಅದರಲ್ಲೂ ಶಿಸ್ತಿನಲ್ಲಿರುವ ಅಧಿಕಾರಿಗಳಿಗೆ ಆಗಾಗ್ಗೆ ವರ್ಗಾವಣೆ ಆಗುತ್ತಲೇಇರುತ್ತದೆ - ಇದರಿಂದ ಬೇರೆಯವರಿಗೆ ಸಂತೋಷವಾಗುತ್ತಿರುತ್ತದೆ" ಎಂದು ಚುರುಕು ಮುಟ್ಟಿಸಿದಳು.

ಆನಂದಮೂರ್ತಿಯವರಿಗೆ ತಮ್ಮ ಹಿರಿಯ ಅಧಿಕಾರಿಗಳ ಮನೋಧರ್ಮ ಅರ್ಥವಾಗಲಿಲ್ಲ. ತಮ್ಮ ಕಾರ್ಯದಕ್ಷತೆಯನ್ನು ಮೆಚ್ಚಿ ಬೆನ್ನು ತಟ್ಟಿದ್ದ ಆ ಹಿರಿಯ ಅಧಿಕಾರಿಗಳು - ತಮ್ಮನ್ನು ರಾಜ್ಯದ ಯವುದೋ ಮೂಲೆಗೆ ವರ್ಗಾವಣೆ ಮಾಡಿರುವುದರ ಹಿನ್ನೆಲೆ ಏನಿರಬಹುದೆಂದು ಚಿಂತಿಸಿ ಸುಸ್ತಾದರು. ವರ್ಗಾವಣೆ ಮಾಡಿದ ಮೇಲಿನ ಅಧಿಕಾರಿಗಳನ್ನು ದೂರವಾಣಿಯ ಮೂಲಕ ಸಂಪರ್ಕಿಸಿ - ಸುಲಿಗೆ, ದರೋಡೆ, ಕೊಲೆ ಇತ್ಯಾದಿಗಳನ್ನು ತಹಬದಿಗೆ ತಂದ ತನಗೇಕೆ ದೂರದೂರಿಗೆ ವರ್ಗವಣೆಯಾಗಿದೆ- ಎಂದು ಕೇಳಲಾಗಿ, ಆ ಮೇಲಿನ ಅಧಿಕಾರಿಗಳು ಈ ರೀತಿ ಹೇಳಿದರು-"ಒಂದು ಚಿಕ್ಕ ಕಳ್ಳತನವೂ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿಇಲ್ಲವೆಂದರೆ ನಂಬಲಸಾಧ್ಯ. ನೀವು ಅಪರಾಧಿಗಳೊಡನೆ ಶಾಮೀಲಾಗಿರಬಹುದೆಂಬ ಅನುಮಾನ ನಮಗಿದೆ. ಊರಿನ ಕೆಲವರ ಹಾಗೂ ನಿಮ್ಮ ಠಾಣೆಯವರ ಅಭಿಪ್ರಾಯವೂ ಇದೆ ಆಗಿದೆ. ಅದ್ದರಿಂದ ವರ್ಗವಣೆ ಮಾಡಲಾಗಿದೆ"ಎಂದು ಗಡುಸಾಗಿ ಹೇಳಿ ರಿಸೀವರ್‍ಅನ್ನು ಧಕ್ಕೆಂದು ಇಟ್ಟರು.

ತನ್ನ ಸತ್ಯ-ಧರ್ಮವನ್ನು ಹಾಡಿ ಹೊಗಳುತ್ತಿದ್ದ ಈ ಊರಿನ ಜನರೇ ನನ್ನ ಬಗ್ಗೆ ದೂರಿತ್ತರೇ, ನಮ್ಮ ಸರ್ವೀಸ್‍ನಲ್ಲಿ ಇಂತಹ ಸಾಹೇಬ್ರನ್ನೇ ಕಂಡಿಲ್ಲ ಎಂದು ಪದೇ ಪದೇ ಹೇಳುತ್ತಿದ್ದ ಠಾಣೆಯವರೇ ಅನುಮಾನ ಪಟ್ಟರೇ, ಅಕಟಕಟ ಇದೆಂತಹ ಅಗ್ನಿ ಪರೀಕ್ಷೆ- ದೇವರೇ - ಎಂದು ಪ್ರಲಾಪಗೈದರು.

ಈ ಪರಿಸ್ಥಿತಿಯಲ್ಲಿ ಮನೆಗೆ ಮರಳಿದಾಗ ಸತಿ ಸರೋಜಿನಿ ಅವರನ್ನು ಸಂತೈಸದೆ "ಆ ಪೇದೆ ಪಾಪಯ್ಯನ ಪತ್ನಿ ಪದ್ಮಾವತಿ ಮೈತುಂಬ ಒಡವೆಗಳನ್ನು ಹೇರ್ಕೊಂಡು ಬಂದು - ಅಯ್ಯೋ ಪಾಪ, ಯಾವುದೋ ದೂರದೂರಿಗೆ ವರ್ಗವಾಯ್ತಂತೆ- ಅಂತಂದ್ಲು. ನೀವೂ ಆಫೀಸರ್ ಆಗಿದ್ದೀರಿ, ಏನೇನೋ ಪದವಿಗಳಲ್ಲಿ ಪದಕ ಪಡೆದಿದ್ದೀರಿ, ದಂಡ. ಪಿ.ಯು.ಸಿ. ನೂ ಆಗದ ಆ ಪೇದೆ ಪಾಪಯ್ಯಾನೇ ನಿಮಗಿಂತ ಮೇಲು" ಎಂದು ಸಿಡುಗುಟ್ಟಿದಳು.

ಹೆಂಡತಿಯ ದುರ್ಗಿ ಅವತಾರ ನೋಡಿ ಆರಕ್ಷಕ ಅಧಿಕಾರಿ ಆನಂದಮೂರ್ತಿಯವರಿಗೆ ತಮ್ಮ ಬಗ್ಗೆ ಜಿಗುಪ್ಸೆ ಮೂಡಿತು. ಮೌನದಿಂದ ಮನೆ ಬಿಟ್ಟರು. ಸತಿ ಸರೋಜಿನಿ ಸಿಡಿದೆದ್ದು ನುಡಿದ ಮಾತುಗಳು ಕಿವಿಯಲ್ಲಿ ಮೊಳಗುತ್ತಿದ್ದವು. ನೀವೂ ಆಫೀಸರ್ ಆಗಿದ್ದೀರಿ, ಏನೇನೋ ಪದವಿಗಳಲ್ಲಿ ಪದಕ ಪಡೆದಿದ್ದೀರಿ, ದಂಡ. ಪಿ.ಯು.ಸಿ.ನೂ ಆಗದ ಆ ಪೇದೆ ಪಾಪಯ್ಯಾನೇ ನಿಮಗಿಂತ ಮೇಲು ಏಂದು ಹೀಯಾಳಿಸಿದಳಲ್ಲ - ಇದಕ್ಕಿಂತ ಅವಮಾನ ಬೇರೆ ಉಂಟೇ - ಈ ಜೀವಕ್ಕೆ ಬೆಲೆ ಇಲ್ಲದ ಮೇಲೆ ಬದುಕಿ ಪ್ರಯೋಜನವೇನು - ಎಂದು ಕೆರೆಯ ದಂಡೆಯ ಬಳಿ ಪೇಚಾಡುತ್ತಾ ಕುಳಿತಿರಲಾಗಿ - ಪ್ರಕಾಶಮಾನವಾದ ಬೆಳಕೊಂದು ಕೆರೆಯ ಮಧ್ಯದಲ್ಲಿ ಮೂಡಿ ಬಂದಂತಾಯಿತು. ಆನಂದಮೂರ್ತಿಗಳು ಆ ಪ್ರಕಾಶನ್ನು ನೋಡುತ್ತಾ ಮೈ ಮರೆತಿರುವಾಗ - ಅಶರೀರವಾಣಿಯೊಂದು "ಧರ್ಮವೆಂದು ಕೂತಿರುವೆಯಲ್ಲ, ಈಗ ಅದಕ್ಕೆಲ್ಲಿ ಬೆಲೆ ಇದೆ? ಅನ್ಯಾಯ ಮಾಡಿದವನು ಅನ್ನ ತಿಂದ, ಸತ್ಯ ಹೇಳಿದವನು ಸತ್ತೇಹೋದ ಎಂಬ ನಾಣ್ನುಡಿ ನಿನಗೆ ಗೊತ್ತಿಲ್ಲವೇ - ಒಂದು ಕೈಯನ್ನು ಮೇಜಿನ ಕೆಳಗಿಡು - ಮತ್ತೊಂದು ಕೈಯ್ಯನ್ನು - ಇತಿ ಲಂಚ ದೇವ ಪ್ರೀಥ್ಯರ್ಥಂ - ಎಂದು ನೀಡುತ್ತಾ ಹೋಗು. ನೀನು ಉದ್ಧಾರವಾಗುತ್ತೀಯೆ, ಸತಿ ಸುತರೊಡನೆ ಸುಖವಾಗಿರುತ್ತೀಯೆ"ಎಂದು ಉಪದೇಶಾಮೃತವನ್ನು ನೀಡಿ ಮರೆಯಾಯಿತು.

"ಇನ್ನು ಎಷ್ಟುದ್ದ ಇದೆ ಈ ಕಥೆ?"ಎಂದು ಧರ್ಮಪತಿ ಕೇಳಲಾಗಿ - ಇನ್ನೇನು ಮುಕ್ತಾಯಕ್ಕೆ ಬಂದಿದೆ ಸಹನೆಯಿಂದ ಕೇಳುವಂತವರಾಗಿ - ಕಥೆ ಮುಂದುವರಿಸುವೆ - ಅಶರೀರವಾಣಿ ಅಮೃತದಂತಹ ಉಪದೇಶವನ್ನು ಪಾಲಿಸುತ್ತಾ ಶ್ರೀವರಲಂಚದೇವರ ವ್ರತವನ್ನು ಸಮಯಕ್ಕನುಸಾರವಾಗಿ ಪಾಲಿಸುತ್ತಾ - ಆನಂದಮೂರ್ತಿಗಳು ಸತಿ ಸರೋಜಿನಿ, ಸುತರೊಡನೆ ಸ್ವಂತ ಬಂಗಲೆಯಲ್ಲಿ ಸುಖ ಸಂತೋಷದಿಂದಿದ್ದರು.

"ಆನಂದಮೂರ್ತಿಯವರು ಸುಧಾರಣೆಗೆ ತಂದಿದ್ದ ಆ ಪ್ರದೇಶವೇನಾಯಿತು?"ಎಂದು ಧರ್ಮಪತಿ ಪ್ರಶ್ನಿಸಲಾಗಿ ಆ ಸಾಕುಮಗಳ ಹೆಸರಿನವಳು ಇಂತೆಂದಳು.

"ಆ ಮೂರ್ತಿಯವರು ಜಾಗ ಖಾಲಿ ಮಾಡಿದೊಡನೆ ಆ ಪ್ರದೇಶದಲ್ಲಿ ಗೂಂಡಾಗಿರಿ ಚಟುವಟಿಕೆಗಳು ಮರುಕಳಿಸಿದವು. ಠಾಣೆಯ ಫಲಕದಲ್ಲಿ ಅಪರಾಧಿಗಳ ಅಂಕಿ ಮೇಲೇರಿತು, ಹೊಸದಾಗಿ ಬಂದಿದ್ದ ಆರಕ್ಷಕ ಅಧಿಕಾರಿಗೆ ಸರ್ಕಾರದಿಂದ ಸನ್ಮಾನ ಸಿಕ್ಕಿತು. ಪೇದೆ ಪಾಪಯ್ಯನ ಪತ್ನಿ ಪದ್ಮಾವತಿಯ ಕೊರಳನ್ನು ಒಂದರಮೇಲೊಂದು ಚಿನ್ನದ ಸರ-ಪದಕ ಅಲಂಕರಿಸಿತು" -ಈ ರೀತಿ ಕಥೆ ಮುಂದುವರೆಸುತ್ತಿರುವಾಗ- ಮಧ್ಯೆ ತಡೆದು ಧರ್ಮಪತಿ " ಜನರಬಗ್ಗೆ ಚಿಂತಿಸ ಬೇಡವೇ?" ಹೀಗೆಂದು ಪ್ರಶ್ನಿಸಿದಾಗ -"ಜನರಬಗ್ಗೆ ಚಿಂತಿಸಿದ ಅಧಿಕಾರಿ ಆನಂದಮೂರ್ತಿಗಳ ಪರಿತಾಪ ಕೇಳಿದಿರಿ- ಇಂದಿನ ಮಕ್ಕಳೇ ಈ ದೇಶದ ಮುಂದಿನ ಸತ್ಪ್ರಜೆಗಳು-ಎಂದು ಉಪದೇಶ ನೀಡುತ್ತಾ, ಕಾಯಕವೇ ಕೈಲಾಸ ಎಂದು ಶ್ರಮಿಸಿದ ಪ್ರಾಥಮಿಕ ಶಾಲೆಯ ಶಿಕ್ಷಕ ಶರಣಪ್ಪನವರ ನೋವಿನ ಕಥೆಯನ್ನು ಕೇಳುವಂತರಾಗಿ" ಎಂದೆನ್ನಲಾಗಿ-"ಶಿಕ್ಷಕ ಶರಣಪ್ಪನವರ ಕಥೆಯನಂತರ ಆರೋಗ್ಯ ಇಲಾಖೆಯ ಅನಂತರಾಮ್‍ರವರ ಕಥೆ ಪ್ರಾರಂಭಿಸುವೆ, ನಂತರ ಸಾರಿಗೆ ಇಲಾಖೆಯ ಸಾಂಬಶಿವರವರ ಕಥೆ ಶುರುಮಾಡುತ್ತೀಯೇ-ಎಲ್ಲಾ ಇಲಾಖೆಯಲ್ಲೂ ಶ್ರೀಲಂಚದೇವರ ಪ್ರಭಾವ ಕಾಣಬರುವುದು - ಮಂಗಳ ಹೇಳು ಸಾಕಾಯಿತು"ಎಂದು ಧರ್ಮಪತಿ ಆದೇಶವಿತ್ತರು.

ಈ ಕಥೆಯನ್ನು ಹೇಳಿದವರಿಗೂ, ಕೇಳಿದವರಿಗೂ ಹಾಗೂ ಪಾಲಿಸಿದವರಿಗೂ ಶ್ರೀವರಲಂಚ ದೇವರು ಸಕಲ ಸುಖ ಸೌಭಾಗ್ಯ ಸನ್ಮಂಗಳವನ್ನು ನೀಡಲಿ, ಲೋಕಾಯುಕ್ತ ಶ್ರೀ. ವೆಂಕಟಾಚಲರವರ ದೃಷ್ಟಿ ಈ ಭಕ್ತಾದಿಗಳಮೇಲೆ ಬೀಳದಿರಲಿ ಎಂದು ಹೇಳುತ್ತಾ -

|ಜೈಮಂಗಳ ಜಯಮಂಗಳ ಶ್ರೀವರಲಂಚದೇವ|